ರಾಯ್ಬರೇಲಿ(ಉತ್ತರ ಪ್ರದೇಶ): ಎರಡೂವರೆ ಅಡಿ ಎತ್ತರದ ಮಹಮ್ಮದ್ ಷರೀಫ್ ಎಂಬಾತ ತನಗೆ ಹುಡುಗಿ ಹುಡುಕಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾನೆ. ಇತ್ತೀಚೆಗೆ ಸರ್ಕಾರಿ ಮನೆ ಸಿಕ್ಕಿದ್ದು, ಇದೀಗ ಬಾಳು ಬೆಳಗಲು ಹೆಂಡತಿ ಬೇಕು. ನೀವೇ ಕನ್ಯೆ ಹುಡುಕಿ ಕೊಡಿ ಎಂದು ಇಲ್ಲಿಯ ಜಿಲ್ಲಾಡಳಿತಕ್ಕೆ ಮಹಮ್ಮದ್ ಷರೀಫ್ ಎಂಬ ಕುಬ್ಜ ವ್ಯಕ್ತಿ ಮನವಿ ಮಾಡಿದ್ದಾನೆ.
ಎರಡೂವರೆ ಅಡಿ ಎತ್ತರದ ಅಜೀಂ ಮನ್ಸೂರಿ ಎಂಬುವರು ಇತ್ತೀಚೆಗೆ ಇದೇ ರೀತಿ ಮನವಿ ಮಾಡಿದ್ದರು. ಬಳಿಕ ವಿವಾಹ ಸಹ ಮಾಡಿಕೊಂಡಿದ್ದರು. ಇದೀಗ ಅಂತಹದ್ದೇ ಮಾರ್ಗ ಅನುಸರಿಸುತ್ತಿರುವ ರಾಯ್ ಬರೇಲಿಯ ಮಹಮ್ಮದ್ ಷರೀಫ್ ನನಗೊಂದು ಅದೇ ರೀತಿ ಓರ್ವ ಹುಡುಗಿ ಹುಡುಕಿಕೊಡಿ ಎಂದು ಜಿಲ್ಲಾಧಿಕಾರಿ ಅವರಿಗೆ ದುಂಬಾಲು ಬಿದ್ದಿದ್ದಾನೆ.
ಸಾಮೂಹಿಕ ವಿವಾಹದ ವೇಳೆ ತಮ್ಮ ಮದುವೆ ಮಾಡುವಂತೆಯೂ ಷರೀಫ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಮಹಾರಾಜ್‌ಗಂಜ್ ತಹಶಿಲ್‌ನ ನಿವಾಸಿಯಾಗಿರುವ ಷರೀಫ್ ದೈಹಿಕವಾಗಿ ಕುಬ್ಜವಾಗಿದ್ದಾರೆ. ಕೇವಲ ಎರಡೂವರೆ ಅಡಿ ಎತ್ತರ ಇರುವ ಷರೀಫ್ ಅವರಿಗೆ ಸದ್ಯ 40 ವರ್ಷ. ಸಮಾಜದ ದೃಷ್ಟಿಯಲ್ಲಿ ಅಪಹಾಸ್ಯಕ್ಕೀಡಾಗುವಷ್ಟು ಎತ್ತರ ಇರುವುದರಿಂದ ಯಾವುದೇ ಕೆಲಸಕ್ಕೂ ಹೋಗುತ್ತಿರಲಿಲ್ಲ. ಇದರಿಂದ ಆತನ ಕುಟುಂಬ ಸದಸ್ಯರು ಸಹ ಮನೆಯಿಂದ ಹೊರಹಾಕಿದ್ದರಂತೆ.
ಈ ಬಗ್ಗೆ ಜಿಲ್ಲಾಡಳಿತಕ್ಕೆ ತನಗೊಂದು ಮನೆ ಮಂಜೂರು ಮಾಡುವಂತೆ ಕುಬ್ಜ ಮನವಿ ಮಾಡಿದ್ದರು. ಅದರಂತೆ ಜಿಲ್ಲಾಡಳಿತ ಇತ್ತೀಚೆಗೆ ತಥಾಸ್ತು ಎಂದಿತ್ತು. ಇದೇ ಖುಷಿಯಲ್ಲಿರುವ ಷರೀಫ್, ಮನೆ ಆಯಿತು ಆ ಮನೆಗೊಂದು ಕನ್ಯೆ ಬೇಕು. ಹಾಗಾಗಿ ನೀವೇ ಹುಡುಕಿಕೊಡಿ ಸಾರ್ ಎಂದು ಜಿಲ್ಲಾಧಿಕಾರಿಗೆ ದುಂಬಾಲು ಬಿದ್ದಿದ್ದಾರೆ. ಷರೀಫ್ ಅರ್ಜಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ, ಸಂಬಂಧಪಟ್ಟ ಇಲಾಖೆಗೆ ರವಾನಿಸುವುದಾಗಿ ಮತ್ತು ಸಾಧ್ಯವಾದ ರೀತಿಯಲ್ಲಿ ಸಹಾಯ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ನಟಿ ಮಲೈಕಾ ಅರೋರಾ ಗರ್ಭಿಣಿ, ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಯ್ಫ್ರೆಂಡ್ ಅರ್ಜುನ್ ಕಪೂರ್?