ಗೋರಾಖ್ಪುರ(ಉತ್ತರ ಪ್ರದೇಶ): ಗುರುವಾರ ತಡರಾತ್ರಿ ಗೋರಖ್ಪುರ್ ಮತ್ತು ಕುಶಿನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತು. ಜಗದೀಶ್ಪುರ ಬಳಿ ನಿಂತಿದ್ದ ಬಸ್ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ 6 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ 27 ಪ್ರಯಾಣಿಕರನ್ನು ಆಂಬ್ಯುಲೆನ್ಸ್‌ಗಳ ಸಹಾಯದಿಂದ ಜಿಲ್ಲಾಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ಮೃತರನ್ನು ನಂದಲಾಲ್ ಪಟೇಲ್ ಅವರ ಪುತ್ರ ಶೈಲೇಶ್ ಪಟೇಲ್ (25), ಕುಶಿನಗರದ ತುರ್ಕಪಟ್ಟಿ ನಿವಾಸಿ ಜವಾಹಿರ್ ಚೌಹಾಣ್ ಅವರ ಪುತ್ರ ಸುರೇಶ್ ಚೌಹಾಣ್ (35), ಮದರ್ಹಾ ಹಟ ಕುಶಿನಗರ ನಿವಾಸಿ ಅಶೋಕ್ ಸಿಂಗ್ ಅವರ ಪುತ್ರ ನಿತೇಶ್ ಸಿಂಗ್ (25), ಮಿಶ್ರಿಪಟ್ಟಿ ಪದರುಣ, ಕುಶಿನಗರ ನಿವಾಸಿ ಹಿಮಾಂಶು ಯಾದವ್ ಪುತ್ರ ಬನ್ಸಾರಿ ಯಾದವ್ (24) ಎಂದು ಗುರುತಿಸಲಾಗಿದೆ. ಇನ್ನುಳಿದಂತೆ ಇಬ್ಬರ ಗುರುತು ಪತ್ತೆಯಾಗಿಲ್ಲ. ಗಾಯಗೊಂಡ ಕೆಲವು ಪ್ರಯಾಣಿಕರ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೈಕ್ಗೆ ಕೇಂದ್ರ ಸಚಿವರ ಕಾರು ಡಿಕ್ಕಿ: ಓರ್ವ ವ್ಯಕ್ತಿ ಸಾವು, ನಾಲ್ವರಿಗೆ ಗಾಯ
ಗೋರಖ್ಪುರದಿಂದ ಪರೌನಾ ಕಡೆಗೆ ಪ್ರಯಾಣಿಕರಿದ್ದ ಬಸ್ ಹೋಗುತ್ತಿತ್ತು. ಮಾರ್ಗಮಧ್ಯೆ ಜಗದೀಶ್‌ಪುರದ ಮಲ್ಲಾಪುರ ಬಳಿ ಬಸ್ ಟೈರ್ ಪಂಕ್ಚರ್ ಆಗಿದೆ. ಚಾಲಕ ಬಸ್ ಅನ್ನು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದರು. ಇತ್ತ ಕಂಡಕ್ಟರ್ ಮತ್ತೊಂದು ಖಾಲಿ ಬಸ್ ವ್ಯವಸ್ಥೆ ಮಾಡಿ ಸ್ಥಳಕ್ಕೆ ಕರೆಸಿದ್ದರು. ಗೋರಖ್ಪುರದಿಂದ ಬಂದಿದ್ದ ಖಾಲಿ ಬಸ್ಗೆ ಪ್ರಯಾಣಿಕರನ್ನು ಹತ್ತಿಸುವ ಹಂತದಲ್ಲಿತ್ತು. ಇನ್ನು ಕೆಲವು ಪ್ರಯಾಣಿಕರು ಎರಡು ಬಸ್ಗಳ ಮಧ್ಯೆ ನಿಂತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಟ್ರಕ್ ಏಕಾಏಕಿ ಬಸ್ಗೆ ಡಿಕ್ಕಿ ಹೊಡೆಯಿತು. ಪರಿಣಾಮ ಸಾವುನೋವು ಸಂಭಿವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಎಸ್ಪಿ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಗಾಯಾಳುಗಳಿಗೆ ಚಿಕಿತ್ಸೆ ನೀಡುವುದರ ಬಗ್ಗೆ ಅಧಿಕಾರಿಗಳು ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಏಮ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.
ಇದನ್ನೂ ಓದಿ: ಆಟೋ - ಟ್ಯಾಂಕರ್ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 6 ಜನರ ಸಾವು