ನವದೆಹಲಿ: ಇಲ್ಲಿ ನಿರ್ಮಾಣವಾಗಿರುವ ಹೊಸ ಸಂಸತ್ ಭವನ ನಾಳೆ ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಟ್ಟಡವನ್ನು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸುವ ಕಾರಣ ದೆಹಲಿಯಲ್ಲಿ ಸಂಚಾರ ನಿಯಮ ಹಾಕಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ನಾಳಿನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಲವು ವಿವಿಐಪಿಗಳ ಸುಗಮ ಸಂಚಾರಕ್ಕೆ ವಿಶೇಷ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದ ಹಲವು ಪ್ರದೇಶವನ್ನು ನಿಯಂತ್ರಿತ ವಲಯವಾಗಿ ಮಾರ್ಪಡಿಸಲಾಗಿದೆ. ಗಣ್ಯರಿಗೆ ಮಾತ್ರ ಆ ರಸ್ತೆಗಳ ಸಂಚಾರಕ್ಕೆ ಅನುಮತಿಸಲಾಗಿದೆ.
"ಮದರ್ ತೆರೇಸಾ ಕ್ರೆಸೆಂಟ್ ರಸ್ತೆ, ಟಾಲ್ಕಟೋರಾ, ಬಾಬಾ ಖರಕ್ ಸಿಂಗ್ ಮಾರ್ಗ, ಗೋಲ್ ದಕ್ ಖಾನಾ, ಅಶೋಕ್ ರಸ್ತೆ, ಪಟೇಲ್ ಚೌಕ್, ಅಶೋಕ್ ರಸ್ತೆ, ವಿಂಡ್ಸರ್ ಪ್ಲೇಸ್, ಜನಪಥ್, ಎಂಎಲ್ಎನ್ಪಿ, ಅಕ್ಬರ್ ರಸ್ತೆ, ಗೋಲ್ ಮೇಥಿ, ಜಿಕೆಪಿ, ತೀನ್ ಮೂರ್ತಿ ಮಾರ್ಗ, ತೀನ್ ಮೂರ್ತಿ ಸುತ್ತುವರಿದ ಪ್ರದೇಶ ಮತ್ತು ಮದರ್ ತೆರೇಸಾ ಕ್ರೆಸೆಂಟ್ ರಸ್ತೆಯನ್ನು ನಿಯಂತ್ರಿತ ಪ್ರದೇಶವನ್ನಾಗಿ ಮಾಡಲಾಗಿದೆ. ಸಾಮಾನ್ಯರಿಗೆ ಈ ಮಾರ್ಗಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸ್ಥಳೀಯ ನಿವಾಸಿಗಳು, ಗುರುತಿಸಿದ ಮತ್ತು ತುರ್ತು ವಾಹನಗಳು ಮಾತ್ರ ಈ ಪ್ರದೇಶದೊಳಗೆ ಚಲಿಸಲು ಅನುಮತಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಈ ಮಾರ್ಗ ಬಳಕೆದಾರರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಬೇಕು. ಬೆಳಗ್ಗೆ 5.30 ರಿಂದ ಮಧ್ಯಾಹ್ನ 3 ರವರೆಗೆ ಸಾಮಾನ್ಯರಿಗೆ ಈ ಮಾರ್ಗಗಳು ಬಂದ್ ಆಗಿರಲಿವೆ. ಸಾರ್ವಜನಿಕರು ಮತ್ತು ವಾಹನ ಚಾಲಕರು ಇದಕ್ಕೆ ಸಹಕರಿಸಬೇಕು ಎಂದು ಟ್ರಾಫಿಕ್ ಪೊಲೀಸರು ಕೋರಿದ್ದಾರೆ.
ಇದನ್ನೂ ಓದಿ: ಸೆಂಗೋಲ್ 'ವಾಕಿಂಗ್ ಸ್ಟಿಕ್': ಕಾಂಗ್ರೆಸ್ ತಮಿಳಿಗರ ಕ್ಷಮೆ ಕೋರಲು ಅಣ್ಣಾಮಲೈ ಆಗ್ರಹ
ಸಂಚಾರ ಮತ್ತು ರಸ್ತೆ ನಿಯಮಗಳನ್ನು ಅನುಸರಿಸಲು ಎಲ್ಲಾ ವಿಭಾಗಗಳಲ್ಲಿ ನಿಯೋಜಿಸಲಾದ ಟ್ರಾಫಿಕ್ ಸಿಬ್ಬಂದಿಯ ನಿರ್ದೇಶನಗಳನ್ನು ಅನುಸರಿಸಬೇಕು. ದೆಹಲಿ ಟ್ರಾಫಿಕ್ ಪೊಲೀಸ್ ಫೇಸ್ಬುಕ್, ಟ್ವಿಟರ್, ವೆಬ್‌ಸೈಟ್ ಮತ್ತು ಸಹಾಯವಾಣಿ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಸೂಚಿಸಲಾದ ಪ್ರದೇಶಗಳಲ್ಲಿ ಯಾವುದಾದರೂ ಪರೀಕ್ಷೆಗಳು ನಡೆಯುತ್ತಿದ್ದರೆ, ಪರೀಕ್ಷಾರ್ಥಿಗಳು ಮುಂಚಿತವಾಗಿಯೇ ಕೇಂದ್ರಗಳನ್ನು ತಲುಪಬೇಕು. ಇದರಿಂದ ಅನಾನುಕೂಲತೆಯನ್ನು ತಪ್ಪಿಸಬೇಕು ಎಂದು ಪೊಲೀಸರು ವಿನಂತಿಸಿದ್ದಾರೆ.
ಭವ್ಯ ಹೊಸ ಸಂಸತ್ ಕಟ್ಟಡ: 950 ಕೋಟಿ ರೂಪಾಯಿ ವೆಚ್ಚದಲ್ಲಿ ಸೆಂಟ್ರಲ್ವಿಸ್ತಾ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಹೊಸ ಸಂಸತ್ ಭವನ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಇದು ಸೊಗಸಾದ ಕಲಾಕೃತಿ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ಭಾರತದ ಹೆಮ್ಮೆಯ ಪ್ರತೀಕವಾಗಿದೆ.
ನೂತನ ಸಂಸತ್ ಭವನದ ಉದ್ಘಾಟನೆಯ ಸವಿನೆನಪಿಗಾಗಿ ಭಾರತ ಸರ್ಕಾರ 75 ರೂಪಾಯಿಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಿದೆ. ಸಂಸತ್ತಿನ ಸದಸ್ಯರು, ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಸದಸ್ಯರು, ಸಭಾಪತಿಗಳು ಮತ್ತು ಇತರ ಗಣ್ಯ ಅತಿಥಿಗಳು ಸೇರಿದಂತೆ ಎಲ್ಲಾ ಗಣ್ಯರನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: ನೂತನ ಸಂಸತ್ ಕಟ್ಟಡದ ಉದ್ಘಾಟನೆಗೆ ಕ್ಷಣಗಣನೆ: ಭವ್ಯ ಭವನದ ಸೊಗಸು ಹೀಗಿದೆ!