ನವದೆಹಲಿ: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಇಂದು ದೇಶಾದ್ಯಂತ 'ಚಕ್ಕಾ ಜಾಮ್' (ಹೆದ್ದಾರಿ ಬಂದ್)ಗೆ ಕರೆ ಕೊಟ್ಟಿವೆ.
ಶನಿವಾರ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ರೈತ ಸಂಘಟನೆಗಳು ಹೆದ್ದಾರಿಗಳನ್ನು ಬಂದ್ ಮಾಡಲಿವೆ. ಪ್ರತಿಭಟನೆಗೆ ಸಮೀಪವಿರುವ ಪ್ರದೇಶಗಳಲ್ಲಿ ಇಂಟರ್ನೆಟ್ ನಿಷೇಧ ಮತ್ತು ಅಧಿಕಾರಿಗಳು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ ರೈತ ಸಂಘಗಳು, ದೇಶಾದ್ಯಂತ ಇಂದು 'ಚಕ್ಕಾ ಜಾಮ್' ಘೋಷಣೆ ಮಾಡಿವೆ.
ಮೂರು ಗಂಟೆಗಳ ಕಾಲ ನಡೆಯುವ 'ಚಕ್ಕ ಜಾಮ್' ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕೈತ್ ಈಗಾಗಲೆ ತಿಳಿಸಿದ್ದಾರೆ. ದೆಹಲಿ ಹೊರತುಪಡಿಸಿ ದೇಶಾದ್ಯಂತ ರಸ್ತೆ ಬಂದ್ ನಡೆಯಲಿದೆ. ಈ ಮೂರು ಗಂಟೆಗಳ ಕಾಲ ಜಾಮ್ನಲ್ಲಿ ಸಿಲುಕುವ ಜನರಿಗೆ ಆಹಾರ ಮತ್ತು ನೀರನ್ನು ರೈತರು ಒದಗಿಸಿಕೊಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲೂ ಬಂದ್ಗೆ ಬೆಂಬಲ
ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವ ಹೋರಾಟಕ್ಕೆ ರಾಜ್ಯದಲ್ಲೂ ಬಂಬಲ ನೀಡಲಾಗುತ್ತಿದೆ. ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಕಬ್ಬ ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕರವೇ ಸೇರಿದಂತೆ ಹಲವಾರು ಸಂಘಟನೆಗಳು ರೈತ ಒಕ್ಕೂಟಗಳು ಘೋಷಿಸಿರುವ ಹೆದ್ದಾರಿ ಬಂದ್ಗೆ ಬೆಂಬಲ ಸೂಚಿಸಿವೆ.
ರಾಜ್ಯದಲ್ಲಿ ಬೆಂಗಳೂರು-ಗೋವಾ, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಪುಣೆ, ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು-ಮೈಸೂರು, ಬೆಂಗಳೂರು-ಚಾಮರಾಜನಗರ, ಬೆಂಗಳೂರು-ಮಾಗಡಿ ರೋಡ್, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಗಳೂ ಬ್ಲಾಕ್ ಆಗುವ ಸಾಧ್ಯತೆಗಳಿವೆ. ಈ ಎಲ್ಲಾ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ಬ್ಲಾಕ್ ಮಾಡಲು ರೈತರು ನಿರ್ಧರಿಸಿದ್ದಾರೆ.