ಚೆನ್ನೈ(ತಮಿಳುನಾಡು): ಸಾಧನೆ ಮಾಡಬೇಕು ಎಂಬ ಛಲ, ಮನಸ್ಸಿದ್ದರೆ, ಕತ್ತಲೆಯಲ್ಲೂ ಮಾರ್ಗ ಸಿಗುತ್ತದೆ. ಇದಕ್ಕೆ ಅನೇಕ ಜ್ವಲಂತ ಉದಾಹರಣೆಗಳು ನಮ್ಮ ಕಣ್ಣು ಮುಂದಿವೆ. ಸದ್ಯ ಅಂತಹ ಮತ್ತೊಂದು ನಿದರ್ಶನ ನಡೆದಿದೆ. ಹೌದು, ಯುಪಿಎಸ್ಸಿ ಪರೀಕ್ಷೆ ಕಬ್ಬಿಣದ ಕಡಲೆ, ಅದು ನಮ್ಮಂಥವರಿಗಲ್ಲ ಎಂದು ವಿಚಾರ ಮಾಡುವವರಿಗೆ ರಂಜಿತ್ ಇದೀಗ ನಮ್ಮ ಮುಂದೆ ಇರುವ ಮತ್ತೊಂದು ಉದಾಹರಣೆಯಾಗಿದ್ದಾರೆ.
ಶ್ರವಣ ಮತ್ತು ಮಾತನಾಡುವ ದುರ್ಬಲತೆ ಹೊಂದಿರುವ ರಂಜಿತ್ ಮೊದಲ ಪ್ರಯತ್ನದಲ್ಲೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಪಾಸ್ ಮಾಡಿದ್ದು, 750ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. 27 ವರ್ಷದ ರಂಜಿತ್ ಮೂಲತಃ ಕೊಯಮತ್ತೂರು ಜಿಲ್ಲೆಯವರಾಗಿದ್ದು, ಅಮೃತ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ಪಡೆದುಕೊಂಡಿದ್ದಾರೆ. ರಂಜಿತ್ ಅವರ ತಾಯಿ ಬಿಇಡಿ ಮಾಡಿದ್ದು, ಮಗ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ತಮಿಳು ಭಾಷೆಯಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ರಂಜಿತ್ ಇದೀಗ ಇತರರಿಗೂ ಮಾದರಿಯಾಗಿದ್ದಾರೆ.
ವಿಶೇಷ ಚೇತನ ಅಭ್ಯರ್ಥಿಗಳ ಪೈಕಿ ರಂಜಿತ್ ಟಾಪ್ ಸ್ಥಾನ ಪಡೆದುಕೊಂಡಿದ್ದು, ಇದೀಗ ಜಿಲ್ಲಾಧಿಕಾರಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ. ಮಗನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಂಜಿತ್ ತಾಯಿ, ವಿಶೇಷಚೇತನ ಆಗಿದ್ದ ಕಾರಣ ಆತನ ಭವಿಷ್ಯದ ಬಗ್ಗೆ ನಮಗೆ ಚಿಂತೆಯಾಗಿತ್ತು. ಆದರೆ, ಇದೀಗ ಆತನ ಸಾಧನೆಯಿಂದ ನಮಗೆ ಹೆಮ್ಮೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: ಸೈಕಲ್ ಮೇಲೆ ಬಟ್ಟೆ ಮಾರುವವನ ಮಗ UPSC ಪಾಸ್.. 45ನೇ ರ್‍ಯಾಂಕ್ ಪಡೆದ ಅನಿಲ್!
ಯುಪಿಎಸ್ಸಿ ಪರೀಕ್ಷೆಯಲ್ಲಿ ಒಟ್ಟು 761 ಅಭ್ಯರ್ಥಿಗಳು ಪಾಸ್ ಆಗಿದ್ದು, ಇದರಲ್ಲಿ 36 ಅಭ್ಯರ್ಥಿಗಳು ತಮಿಳುನಾಡಿನವರು ಎಂಬುದು ಗಮನಾರ್ಹ ಸಂಗತಿಯಾಗಿದೆ.