ದೇಶದಲ್ಲಿ, ಕೋವಿಡ್ ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಸೋಂಕು ಹರಡಲು ಕಾರಣವಾಗಿದೆ. ಒಂದು ದಿನದಲ್ಲಿ 1.25 ಲಕ್ಷಕ್ಕೂ ಹೆಚ್ಚು ಮಂದಿಗೆ ಈ ಸೋಂಕು ತಗಲುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಈ ಸೋಂಕು ಸದ್ಯಕ್ಕೆ ನಿಯಂತ್ರಣಕ್ಕೆ ಸಿಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಠಿಣ ಕಾರ್ಯತಂತ್ರ ಪಾಲಿಸುವ ಭರವಸೆ ನೀಡಿದ್ದು ಈ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ.
ನಿಖರ ಪರೀಕ್ಷೆ, ಚಿಕಿತ್ಸೆ, ಕೋವಿಡ್ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ವ್ಯಾಪಕವಾದ ಲಸಿಕೆ ಕಾರ್ಯಕ್ರಮದ ಮೂಲಕ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರಬಹುದು ಎಂಬ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ. ಈ ಕಾರ್ಯತಂತ್ರದ ಭಾಗವಾಗಿ ಏಪ್ರಿಲ್ 11ರಿಂದ 14ರವರೆಗೆ ಅವರು ಲಸಿಕೀಕರಣ ಉತ್ಸವವನ್ನು ನಡೆಸಬೇಕೆಂದು ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರವು ಈ ಲಸಿಕೀಕರಣ ಉತ್ಸವವು 100ಕ್ಕಿಂತ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ನಡೆಯಬೇಕೆಂದು ಕರೆ ನೀಡಿದೆ.
ದೇಶದ ಲಸಿಕೆ ಕಾರ್ಯಕ್ರಮ ಈಗ ಎಷ್ಟು ಸನ್ನದ್ಧವಾಗಿದೆ ಎಂದರೆ ಒಂದು ದಿನದಲ್ಲಿ 40 ಲಕ್ಷ ಡೋಸ್ ಲಸಿಕೆ ನೀಡುವ ಸಾಮರ್ಥ್ಯ ಬೆಳೆಸಿಕೊಂಡಿದೆ. ಆದಾಗ್ಯೂ, ಈ ಲಸಿಕಾ ಕಾರ್ಯಕ್ರಮ ಎಲ್ಲೆಡೆ ವಿಸ್ತರಿಸುವುದು ನಮ್ಮ ಆರೋಗ್ಯ ಕ್ಷೇತ್ರದ ಮೇಲಿರುವ ಅತಿ ದೊಡ್ಡ ಸವಾಲಾಗಿದೆ.
ಈ ಉತ್ಸವದ ಸಮಯದಲ್ಲಿ ಲಸಿಕೆ ನೀಡಲು ಕಚೇರಿಗಳಿಗೆ ಭೇಟಿ ನೀಡಲು ಅಗತ್ಯವಾದ ಹೆಚ್ಚುವರಿ ವೈದ್ಯಕೀಯ ಮಾನವ ಸಂಪನ್ಮೂಲಗಳ ಜೊತೆಗೆ, ಹೆಚ್ಚುವರಿ ಪ್ರಮಾಣದ ಲಸಿಕೆಗಳು ಸಹ ಲಭ್ಯವಿರಬೇಕು. ಈಗಾಗಲೇ ಲಸಿಕೆ ಕೊರತೆ ರಾಜಕೀಯ ವಿವಾದವನ್ನು ದೇಶದಲ್ಲಿ ಹುಟ್ಟು ಹಾಕಿದೆ. ಮಹಾರಾಷ್ಟ್ರ ರಾಜ್ಯ ಈಗಾಗಲೇ ಲಸಿಕೆ ಕೊರತೆ ಬಗ್ಗೆ ಕೇಂದ್ರದ ಗಮನ ಸೆಳೆದಿದೆ.
ಆದರೆ, ಕೋವಿಡ್ 19 ಪ್ರಕರಣಗಳನ್ನು ತಡೆಗಟ್ಟುವಲ್ಲಿ ತನ್ನದೇ ಆದ ವೈಫಲ್ಯವನ್ನು ಮುಚ್ಚಿಹಾಕಲು ಮಹಾರಾಷ್ಟ್ರ ರಾಜ್ಯ ಸರ್ಕಾರ ಲಸಿಕೆ ಕೊರತೆ ವಿಷಯವನ್ನು ಎತ್ತುವ ಮೂಲಕ ಈ ವಿಷಯವನ್ನು ರಾಜಕೀಯಕರಣಗೊಳಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಆರೋಪಿಸಿದ್ದಾರೆ. ಆದರೆ, ಈಗ ಕೋವಿಡ್ ಲಸಿಕೆ ಕೊರತೆ ಸುದ್ದಿ ಹಲವು ರಾಜ್ಯಗಳಿಂದ ಕೇಳಿ ಬರುತ್ತಿದೆ.
ಮಹಾರಾಷ್ಟ್ರದ ಶಿವಸೇನೆ - ಕಾಂಗ್ರೆಸ್-ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಗಳ ಸಮ್ಮಿಶ್ರ ಸರ್ಕಾರದ ಜೊತೆಗೆ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಕೇರಳ, ಕರ್ನಾಟಕ, ಛತ್ತೀಸ್ಘಡ, ಜಾರ್ಖಂಡ್ ಮತ್ತು ರಾಜಸ್ತಾನ ಸರ್ಕಾರಗಳು ಸಹ ಲಸಿಕೆ ಕೊರತೆಯ ಬಗ್ಗೆ ದೂರು ನೀಡುತ್ತಿವೆ. ಹಾಗಾಗಿ ಈ ಕೋವಿಡ್ ಲಸಿಕೆ ಕೊರತೆ ಎಲ್ಲೆಡೆ ಈಗ ಆರಂಭವಾಗಿದೆ ಎಂದು ತಿಳಿದುಕೊಳ್ಳಬಹುದು.
ದೇಶದ ಲಸಿಕೆ ತಯಾರಕರ ಉತ್ಪಾದನಾ ಸಾಮರ್ಥ್ಯ, ಅವುಗಳ ಪ್ರಸ್ತುತ ಉತ್ಪಾದನೆ ಮತ್ತು ಅವರು ವಿತರಿಸುತ್ತಿರುವ ಒಟ್ಟು ಲಸಿಕೆ ಪ್ರಮಾಣಕ್ಕೆ ಸಂಬಂಧಿಸಿದ ಸಂಗತಿಗಳನ್ನು ಯಾರೂ ತಿದ್ದಲು ಅವಕಾಶವಿಲ್ಲ. ಈ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ರಾಷ್ಟ್ರವು ಒಗ್ಗಟ್ಟಿನಿಂದ ಹೋರಾಡಲು ನಿಲ್ಲಬೇಕಾದ ಸಮಯವಿದು. ಈ ನಿರ್ಣಾಯಕ ಸಂದರ್ಭದಲ್ಲಿ ಈ ಲಸಿಕೆ ಕಾರ್ಯಕ್ರಮ ಅಥವಾ ಕೋವಿಡ್ ನಿಯಂತ್ರಣ ಕಾರ್ಯಕ್ರಮದಲ್ಲಿ ರಾಜಕೀಯವನ್ನು ಯಾವುದೇ ಪ್ರಜ್ಞಾವಂತರು ಮೆಚ್ಚಲು ಸಾಧ್ಯವಿಲ್ಲ.
ಭಾರತದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮ ಜನವರಿ 16ರಂದು ಪ್ರಾರಂಭವಾಯಿತು. 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯೊಂದಿಗೆ ಈ ಲಸಿಕೆ ಕಾರ್ಯಕ್ರಮ ಆರಂಭವಾಯಿತು. ಮೊದಲಿಗೆ ಕೋವಿಡ್ ಮುಂಚೂಣಿಯ ಯೋಧರಿಗೆ ಆದ್ಯತೆ ನೀಡಲಾಯಿತು. ಬಳಿಕ ಹಿರಿಯ ನಾಗರಿಕರಿಗೆ ಹಾಗೂ ಸಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಆದರೆ, ಈ ವರ್ಗದ ಒಟ್ಟು ಉದ್ದೇಶಿತ ಗುರಿಯ ಮೂರನೇ ಒಂದು ಭಾಗದಷ್ಟು ಜನರಿಗೆ ಇದುವರೆಗೂ ಲಸಿಕೆ ನೀಡಿಲ್ಲ.
ಈ ಹಂತದಲ್ಲಿ ಲಸಿಕೆ ಕೊರತೆ ಹೆಚ್ಚಾಗಿದೆ ಎಂಬ ವಿಷಯ ಅತ್ಯಂತ ಗಂಭೀರ ವಿಷಯವಾಗಿದೆ. ಏಕೆಂದರೆ ಸುಮಾರು 15 ದಿನಗಳ ಹಿಂದೆ ನೀತಿ ಆಯೋಗದ ಸದಸ್ಯ ಪ್ರೊಫೆಸರ್ ವಿ.ಕೆ. ಪೌಲ್ ಅವರು ಆಗಸ್ಟ್ ತಿಂಗಳೊಳಗೆ ಸೀರಮ್ ಸಂಸ್ಥೆ 47 ಕೋಟಿ ಡೋಸ್‌ಗಳನ್ನು ಉತ್ಪಾದಿಸಲಿದೆ ಮತ್ತು ಭಾರತ್ ಬಯೋಟೆಕ್ ಸಂಸ್ಥೆ 12 ಕೋಟಿ ಡೋಸ್‌ಗಳನ್ನು ಉತ್ಪಾದಿಸಲಿದೆ ತಿಳಿಸಿದ್ದರು. ಅಮೆರಿಕದ ರಕ್ಷಣಾ ಕಾನೂನುಗಳ ಕಾರಣದಿಂದಾಗಿ ಲಸಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಅಡೆತಡೆಗಳಿವೆ ಎಂದು ಸುಮಾರು ಒಂದು ತಿಂಗಳ ಹಿಂದೆ ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಕೇಂದ್ರಕ್ಕೆ ಮನವಿ ಮಾಡಿತ್ತು. ಸೀರಮ್ ಸಂಸ್ಥೆ ಮತ್ತು ಭಾರತ್ ಬಯೋಟೆಕ್ ಎರಡೂ ಉತ್ಪಾದನೆಯನ್ನು ಹೆಚ್ಚಿಸಲು ತುರ್ತು ಆರ್ಥಿಕ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣ ಕಾರ್ಯ ಪ್ರವೃತ್ತವಾಗಬೇಕಿದೆ.
ಕಳೆದ ಜನವರಿಯಲ್ಲಿ, ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೋವಿಡ್ ವಿರುದ್ಧ ದೇಶವು ತನ್ನದೇ ಆದ ಎರಡು ಲಸಿಕೆಗಳನ್ನು ಉತ್ಪಾದಿಸುತ್ತಿರುವುದು ಪ್ರತಿಯೊಬ್ಬ ಭಾರತೀಯ ನಾಗರಿಕರಿಗೂ ಹೆಮ್ಮೆಯ ವಿಷಯ ಎಂದು ಬಣ್ಣಿಸಿದ್ದರು. ಈಗ ಅವರು ಈ ಎರಡು ಲಸಿಕೆ ತಯಾರಿಕಾ ಸಂಸ್ಥೆಗಳು ಅಗತ್ಯವಾದ ಕಚ್ಚಾ ವಸ್ತುಗಳು ಮತ್ತು ಹಣಕಾಸಿನ ನೆರವಿನ ಸಂಬಂಧ ಮಾಡಿರುವ ಮನವಿಗೆ ಅವರು ತಕ್ಷಣ ಉದಾರವಾಗಿ ಸ್ಪಂದಿಸಬೇಕು. ಈ ಸವಾಲುಗಳು ದೇಶದ ಲಸಿಕಾ ಕಾರ್ಯಕ್ರಮದ ಮೇಲೆ ಯಾವುದೇ ದುಷ್ಪರಿಣಾಮ ಬೀರಬಾರದು.
ಕೋವಿಡ್ನಿಂದ ದೊಡ್ಡ ಮಟ್ಟಿಗೆ ಭಾದಿತವಾಗಿರುವ ಅಮೆರಿಕ ಸಂಯುಕ್ತ ಸಂಸ್ಥಾನ ಲಸಿಕಾ ಕಾರ್ಯಕ್ರಮದಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಅಲ್ಲಿನ ಅಧ್ಯಕ್ಷ ಜೋ ಬಿಡೆನ್ ಅವರು ಏಪ್ರಿಲ್ 19ರಿಂದ ದೇಶದ ಎಲ್ಲ 18 ವರ್ಷ ದಾಟಿದ ವ್ಯಕ್ತಿಗೂ ಲಸಿಕೆ ಲಭ್ಯವಾಗಲಿದೆ ಎಂದು ಘೋಷಿಸಿದ್ದಾರೆ. ಆದರೆ, ಭಾರತದಲ್ಲಿ ಈವರೆಗೆ 45 ವರ್ಷಕ್ಕೆ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಎಂದು ಸರ್ಕಾರ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇತ್ತೀಚೆಗೆ ದೇಶದ ಎಲ್ಲ ವಯಸ್ಕರಿಗೆ ಲಸಿಕೆ ಪಡೆಯಲು ಅವಕಾಶ ನೀಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದೆ. ಉದ್ದೇಶಿತ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕಾದರೆ ಕೋವಿಡ್ ಲಸಿಕೆಯ ವ್ಯಾಪಕ ಉತ್ಪಾದನೆ ಮತ್ತು ನೀಡುವಿಕೆ ಅಗತ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿದಾಗ ಮಾತ್ರ ನಮ್ಮ ದೇಶವು ಕೋವಿಡ್ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿದೆ.
ಇದನ್ನೂ ಓದಿ: ಕಿರಿಕ್ ಕಾಪಿ ರೈಟ್ ಪ್ರಕರಣ: ಕೋರ್ಟ್ಗೆ ಹಾಜರಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ