ವಾರಾಣಸಿ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಬನಾರಸ್ ಪಾನ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ವಾರಾಣಸಿಗೆ ಭೇಟಿ ನೀಡುವ ಬಹುತೇಕರು ಪಾನ್ ಸವಿ ನೋಡಲು ಬಯಸುತ್ತಾರೆ. ಅಷ್ಟೇ ಅಲ್ಲ, ಬನಾರಸ್‌ನ ಪ್ರತಿಯೊಬ್ಬರು ಕೂಡ ಪಾನ್ ಸೇವಿಸುತ್ತಾರೆ. ದಿನ ನಿತ್ಯವೂ ಮಾರಾಟವಾಗುವ ಬನಾರನ್ನ ಪಾನ್ ಕುರಿತ ಅಂಕಿ - ಅಂಶಗಳೇ ಹುಬ್ಬೇರಿಸುವಂತಿದೆ. ಇದರಿಂದ ಇಲ್ಲಿನ ಜನರ ಪಾನ್ ಕ್ರೇಜ್ ಎಂತಹದ್ದು ಎಂಬುವುದೂ ತಿಳಿಯುತ್ತದೆ.
ಹೌದು, ವಾರಾಣಸಿ ಅಥವಾ ಬನಾರಸ್ ಸುಮಾರು 40 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಅಚ್ಚರಿ ಎಂದರೆ ಅಲ್ಲಿ ಅರ್ಧದಷ್ಟು ಜನರು ಪಾನ್ ತಿನ್ನುತ್ತಾರೆ ಎಂದರೆ ನೀವು ನಂಬಲೇಬೇಕು. ಹೀಗಾಗಿ ಟ್ರಕ್ಗಟ್ಟಲೇ ವೀಳ್ಯದೆಲೆಗಳು ಮಾರಾಟವಾಗುತ್ತವೆ. ಬೆಳಗ್ಗೆಯಿಂದ ಸಂಜೆಯವರೆಗೆ ನೂರಾರು ಜನರು ಪಾನ್ ತಿನ್ನುತ್ತಾರೆ. ಇದರ ಪರಿಣಾಮವಾಗಿ ದಿನವೂ ಅಂದಾಜು 30 ಲಕ್ಷ ರೂಪಾಯಿಯಷ್ಟು ವಹಿವಾಟು ಈ ಪಾನ್ ಮೂಲಕವೇ ನಡೆಯುತ್ತದೆ.
ನಿತ್ಯ 25 ಬೀಡಾ ತಿನ್ನುವ ಜನ: ಬನಾರಸ್ ಜನರಿಗೆ ಪಾನ್ನ ಕ್ರೇಜ್ ಎಷ್ಟಿದೆ ಎಂದರೆ ನಿತ್ಯವೂ ಹತ್ತಾರು ಪಾನ್ಗಳನ್ನು ಜಗಿಯುತ್ತಲೇ ಇರುತ್ತಾರೆ. ಹಲವರು ಐದು ಪಾನ್ಗಳು, ಮತ್ತೆ ಹಲವರು ಹತ್ತು ಪಾನ್ಗಳು ತಿಂದರೆ, ಇನ್ನೂ ಅನೇಕರು 25 ಪಾನ್ಗಳವರೆಗೂ ತಿನ್ನುತ್ತಾರೆ. ಪ್ರತಿ ಶುಭ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೀಡಾಗಳು ತಿನ್ನುತ್ತಲೇ ಇರುತ್ತಾರೆ ಎಂದು ಸ್ಥಳೀಯ ನಿವಾಸಿ ಹರೀಶ್ ಮಿಶ್ರಾ ಹೇಳುತ್ತಾರೆ.
5ರಿಂದ ಪಾನ್ ಬೆಲೆ ಆರಂಭ: ಬನಾರಸ್‌ನಲ್ಲಿ ಪಾನ್ ವ್ಯವಹಾರವು ತುಂಬಾ ಹಳೆಯದು. ಹಲವು ದಶಕಗಳಿಂದ ಪಾನ್ ಮಾರಲಾಗುತ್ತದೆ. ಬನಾರಸ್ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 5 ರೂ.ನಿಂದ 50 ರೂ.ವರೆಗೆ ಪಾನ್ ಲಭ್ಯವಿದೆ. ಒಂದು ವಾರದಲ್ಲಿ ಆರು ಟ್ರಕ್ ಲೋಡ್ ಪಾನ್ ಮಾರಾಟವಾಗುತ್ತದೆ. ಒಂದು ಟ್ರಕ್‌ನಲ್ಲಿ 700 ಬುಟ್ಟಿಗಳು ಬರುತ್ತವೆ. ಇದರ ಪ್ರಕಾರ ನಿತ್ಯ ಒಂದು ಕೋಟಿಗೂ ಹೆಚ್ಚು ವೀಳ್ಯದೆಲೆಗಳು ಮಾರಾಟವಾಗುತ್ತವೆ ಎಂದು ಬರಾಯ್ ಸಂಘದ ಪ್ರಧಾನ ಕಾರ್ಯದರ್ಶಿ ಬಬ್ಲು ಚೌರಾಸಿಯಾ ತಿಳಿಸಿದ್ದಾರೆ.
ಎಲೆಗಳ ಒಂದು ಬುಟ್ಟಿ ಬೆಲೆ ಎಷ್ಟು?: ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಎಲೆಗಳ ಒಂದು ಬುಟ್ಟಿ 150 ರಿಂದ 300 ರೂ. ಇತ್ತು. ಬೇಡಿಕೆ ಹೆಚ್ಚಿದ್ದಾಗ ಈ ಬುಟ್ಟಿ 800 ರಿಂದ 1,000 ರೂಪಾಯಿವರೆಗೆ ಮಾರಾಟವಾಗುತ್ತದೆ. ವಾರಾಣಾಸಿಯಲ್ಲಿ ಪಾನ್ ದರಿಬಾ ಎಂಬ ಪ್ರದೇಶ ವೀಳ್ಯದೆಲೆಗೆ ದೊಡ್ಡ ಮಾರುಕಟ್ಟೆವಾಗಿದೆ. ಅಲ್ಲಿಯೇ ಪಾನ್ ಮತ್ತು ಅದರ ತಯಾರಿಕೆಯ ವಸ್ತುಗಳ ಮಾರಾಟ ಮಾಡಲಾಗುತ್ತದೆ. ಬನಾರಸ್‌ನ ಈ ಮಾರುಕಟ್ಟೆಯಿಂದ ಪೂರ್ವಾಂಚಲ್‌ಗೆ ವೀಳ್ಯದೆಲೆಗಳ ಪೂರೈಕೆಯೂ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈ ಬನಾರಸ್ ಪಾನ್ ವ್ಯಾಪಾರದಲ್ಲಿ ಸುಮಾರು 5,000ರಿಂದ 10,000 ಜನರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಸಣ್ಣ ಮತ್ತು ದೊಡ್ಡ ಉದ್ಯಮಿಗಳು ಸೇರಿದಂತೆ ಅಂಗಡಿ ಅವರೂ ಕೂಡ ಸೇರಿದ್ದಾರೆ. ಈ ಮೂಲಕ ಬನಾರಸ್‌ನಲ್ಲಿ ನಿತ್ಯ ಸುಮಾರು 25ರಿಂದ 30 ಲಕ್ಷ ರೂಪಾಯಿ ಮೌಲ್ಯದ ಪಾನ್ ಮಾರಾಟವಾಗುತ್ತದೆ ಎಂದು ಪಾನ್ ವ್ಯಾಪಾರಿಗಳು ಹೇಳುತ್ತಾರೆ.
ಇದನ್ನೂ ಓದಿ: ಔಷಧೀಯ ಗುಣಗಳ ಆಗರ ವೀಳ್ಯದೆಲೆ..ಇದರ ಮಹತ್ವಗಳೇನು?