ತಿರುವನಂತಪುರಂ (ಕೇರಳ): ಐದು ವರ್ಷಗಳ ಹಿಂದೆ ಪಕ್ಷವು ನನ್ನನ್ನು ಮಂತ್ರಿಯನ್ನಾಗಿ ಮಾಡಿತು. ನಾನು ನನ್ನ ಕರ್ತವ್ಯಗಳನ್ನು ಚೆನ್ನಾಗಿ ನಿರ್ವಹಿಸಿದ್ದೇನೆ ಎಂದು ನಾನು ನಂಬುತ್ತೇನೆ ಎಂದು ಕೇರಳದ ಮಾಜಿ ಸಚಿವೆ ಕೆ.ಕೆ. ಶೈಲಜಾ ಅಭಿಪ್ರಾಯಪಟ್ಟಿದ್ದಾರೆ.
ಸಿಎಂ ಪಿಣರಾಯಿ ವಿಜಯನ್ ಮೊದಲ ಅವಧಿಯ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಯಶಸ್ಸು ಕಂಡಿದ್ದ ಕೆ.ಕೆ.ಶೈಲಜಾ ಅವರು ಎಲ್‌ಡಿಎಫ್‌ನ ಸತತ ಎರಡನೇ ಅವಧಿಯ ಸರ್ಕಾರದಲ್ಲಿ ಸಂಪುಟದಿಂದ ಹೊರಗುಳಿದಿದ್ದು, ಹೊಸ ಜನರಿಗೆ ಅವಕಾಶ ನೀಡುವುದು ಒಳ್ಳೆಯದು ಎಂದಿದ್ದಾರೆ.
ಸಂಪುಟದಿಂದ ಹೊರಗುಳಿದ ವಿಚಾರ ಗೊತ್ತಾಗುತ್ತಿದ್ದಂತೆ ಮಾತನಾಡಿದ ಶೈಲಜಾ ಟೀಚರ್ ಕೋವಿಡ್ ವೇಳೆಯಲ್ಲಿ ನಾನು ಉತ್ತಮ ಸಾಧನೆ ತೋರಿದ ಏಕೈಕ ಸಚಿವೆಯಲ್ಲ. ಸಿಎಂ ಸೇರಿದಂತೆ ಎಲ್ಲರೂ ಸಾಮೂಹಿಕವಾಗಿ ಶ್ರಮಿಸಿದ್ದಾರೆ. ನಾನು ನನ್ನ ಪಾತ್ರವನ್ನು ನಿರ್ವಹಿಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿ ಈವರೆಗೆ 111 ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆ
ಎರಡನೇ ಅವಧಿಯ ಸರ್ಕಾರದಲ್ಲಿ ಸೇರ್ಪಡೆಗೊಳ್ಳಬೇಕು ಎಂಬ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿದ ಅವರು ಈ ರೀತಿ ಒತ್ತಡ ಹೇರುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ, ಕೇರಳದಲ್ಲಿ ಹಾವಳಿ ಸೃಷ್ಟಿಸಿದ್ದ ನಿಪಾ ವೈರಸ್ ಅನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದಕ್ಕೆ ಶೈಲಜಾ ಅವರು ರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಲ್ಪಟ್ಟರು. ಇವರು ಕೋವಿಡ್ ಅನ್ನು ನಿರ್ವಹಿಸುತ್ತಿದ್ದ ರೀತಿ ಅಂತಾರಾಷ್ಟ್ರೀಯ ಮನ್ನಣೆ ಪಡೆದುಕೊಂಡಿತ್ತು.