ಹೈದರಾಬಾದ್ (ತೆಲಂಗಾಣ): ಜನರು ಲಾಜಿಕ್ಗಿಂತಲೂ ಮ್ಯಾಜಿಕ್ ಅನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ನಮ್ಮಲ್ಲಿ ವಿಜ್ಞಾನಿಗಳಿಗಿಂತಲೂ ಬಾಬಾಗಳೇ ಫೇಮಸ್. ಇದು ಸಿನಿಮಾ ಡೈಲಾಗ್ ಆದರೂ, ತೆಲಂಗಾಣದಲ್ಲಿ ನಡೆದ ಘಟನೆ ಇದು ಸತ್ಯ ಎಂಬುದನ್ನು ಸಾಬೀತು ಮಾಡಿದೆ. ತನಗೆ ಸಂಕಷ್ಟ ಪರಿಹಾರ ಮಾಡು ಎಂದು ಬೇಡಿಕೊಂಡು ಬಾಬಾನ ಬಳಿಗೆ ಹೋದ ಯುವತಿ ಕೊನೆಗೆ ಸೇರಿದ್ದು ಆಸ್ಪತ್ರೆಗೆ.
ಘಟನೆ ಏನು?: ವಿಕಾರಾಬಾದ್ ಜಿಲ್ಲೆಯ ಪರಿಗಿ ಮಂಡಲದ ನಸ್ಕಲ್ನಲ್ಲಿ ಡೋಂಗಿ ಬಾಬಾನೊಬ್ಬ ತಾನು ಹೇಳಿದಂತೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿ, ತನ್ನಲ್ಲಿಗೆ ಬಂದ ಯುವತಿಗೆ ಕೈ-ಕಾಲುಗಳನ್ನು ಬೆಂಕಿಯ ಮೇಲೆ ಇಡಲು ಸೂಚಿಸಿದ್ದಾನೆ. ಇದರಂತೆ ಮಾಡಿದ ಯುವತಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಯುವತಿಯ ಸ್ಥಿತಿ ನೋಡಿ ಕುಟುಂಬಸ್ಥರು ಹೆದರಿ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಯುವತಿಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೇ, ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದು ತಕ್ಷಣವೇ ನಕಲಿ ಬಾಬಾ ರಫಿ ಎಂಬಾತನನ್ನು ಬಂಧಿಸಿದ್ದಾರೆ.
ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದಾನೆ ಎಂದು ಈ ನಕಲಿ ಬಾಬಾ ರಫಿ ವಿರುದ್ಧ ಈಗಾಗಲೇ ಹಲವು ಆರೋಪಗಳಿವೆ. ಜನರಿಗೆ ಮೋಸ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ಪೀಕಿದ್ದಾನೆ ಎಂದು ಸ್ಥಳೀಯರು ದೂರಿದ್ದಾರೆ.
ಓದಿ: ಸರಸರನೇ ಕಂಬ ಹತ್ತುವ ಯುವತಿ.. ಜೂನಿಯರ್ ಲೈನ್ಮೆನ್ ಹುದ್ದೆ ಗಿಟ್ಟಿಸಿಕೊಂಡ ತೆಲಂಗಾಣದ ಸಿರಿಶಾ