ಪ್ರಯಾಗ್ ರಾಜ್ (ಉತ್ತರ ಪ್ರದೇಶ): ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ನಡೆದ ಕನಿಷ್ಠ ಆರು ಬಾಂಬ್ ಎಸೆತದ ಪ್ರಕರಣಗಳಲ್ಲಿ ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳು ಭಾಗಿಯಾಗಿರುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಪ್ರತಿಷ್ಠಿತ ಶಾಲೆಯೊಂದರ ಆವರಣದಲ್ಲಿ ಕಡಿಮೆ ತೀವ್ರತೆಯ ಬಾಂಬ್ ಎಸೆಯಲಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು ಹಲವಾರು ಆಘಾತಕಾರಿ ವಿಷಯಗಳನ್ನು ಬಯಲು ಮಾಡಿದ್ದಾರೆ.
ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳು ಆನ್ಲೈನ್ ವಿಡಿಯೋಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿನ ಮಾಹಿತಿಗಳನ್ನು ನೋಡಿ ಬಾಂಬ್ ತಯಾರಿಸುವುದನ್ನು ಕಲಿತಿದ್ದರು. ಏರಿಯಾದಲ್ಲಿ ತಮ್ಮ ಗುಂಪಿನ ಪ್ರಭುತ್ವ ಸ್ಥಾಪಿಸಲು ಮತ್ತು ಬಾಂಬ್ ತಯಾರಿಕೆ ಮತ್ತು ಅದರ ಬಳಕೆ ಕುರಿತಂತೆ ಸೋಶಿಯಲ್ ಮೀಡಿಯಾಗಳಿಗೆ ವಿಡಿಯೋ ಅಪ್ಲೋಡ್ ಮಾಡುವುದಕ್ಕಾಗಿ, ಇವರು ನಗರದ ಮೂರು ಪ್ರತಿಷ್ಠಿತ ಶಾಲೆಗಳ ಗೇಟ್ ಎದುರು ಕಚ್ಚಾ ಬಾಂಬ್ಗಳನ್ನು ಎಸೆದಿರುವುದು ತಿಳಿದು ಬಂದಿದೆ.
ಈ ಹುಡುಗರು ತಮ್ಮ ಗುಂಪುಗಳಿಗೆ ಹಾಗೂ ವಾಟ್ಸ್‌ಆ್ಯಪ್ ಗ್ರೂಪ್ಗಳಿಗೆ ತಾಂಡವ್, ಜಗ್ವಾರ್, ಟೈಗರ್, ಇಮ್ಮಾರ್ಟಲ್ ಮತ್ತು ರಂಗಬಾಜ್ ಮುಂತಾದ ಹೆಸರನ್ನಿಟ್ಟುಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಬಾಂಬ್ ಎಸೆದ 11 ಆರೋಪಿಗಳನ್ನು ಮೂರು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ 10 ಹುಡುಗರು ಅಪ್ರಾಪ್ತರಾಗಿದ್ದಾರೆ. ಐಪಿಸಿ ಮತ್ತು ಸ್ಫೋಟಕ ಕಾಯ್ದೆಗಳ ಸೂಕ್ತ ಸೆಕ್ಷನ್ಗಳಡಿ ಇವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಹುಡುಗರಿಂದ ಎರಡು ಮೋಟರ್ ಸೈಕಲ್, 10 ಮೊಬೈಲ್ ಮತ್ತು ಎರಡು ಕಚ್ಚಾ ಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಓರ್ವ ಅಪ್ರಾಪ್ತನನ್ನು ಜೈಲಿಗಟ್ಟಲಾಗಿದ್ದು, ಇನ್ನುಳಿದವನ್ನು ಬಾಲಾಪರಾಧಿ ಮನೆಗೆ ಕಳುಹಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಐಜಿಪಿ ರಾಕೇಶ್ ಸಿಂಗ್, "ಸೋಶಿಯಲ್ ಮೀಡಿಯಾ ಆ್ಯಪ್ಗಳಲ್ಲಿ ಗ್ರೂಪ್ ರಚಿಸಿಕೊಂಡಿರುವ ಮೂರು ವಿಭಿನ್ನ ಕಾನ್ವೆಂಟ್ ಶಾಲೆಗಳ ಈ ಹುಡುಗರು, ನಗರದಲ್ಲಿ ಹಾಗೂ ತಾವು ಕಲಿಯುವ ಶಾಲೆಯಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸುವ ಆವೇಶದಲ್ಲಿದ್ದರು. ಶಾಲೆಯ ಗೇಟ್ ಮುಂದೆ ಬಾಂಬ್ ಎಸೆಯುವುದು ಅವರ ಟ್ರಿಕ್ ಆಗಿತ್ತು. ಪಟಾಕಿಗಳಿಂದ ಹೊರತೆಗೆದ ಸಿಡಿಮದ್ದಿನೊಂದಿಗೆ ಗಾಜಿನ ಚೂರು, ಇಟ್ಟಿಗೆ ಮುಂತಾದುವುಗಳನ್ನು ಸೇರಿಸಿ ಇವರು ಕಚ್ಚಾ ಬಾಂಬ್ ತಯಾರಿಸುತ್ತಿದ್ದರು" ಎಂದು ಹೇಳಿದರು.