ಹೈದರಾಬಾದ್ (ತೆಲಂಗಾಣ): ಮೌಲ್ಯಯುತ ಶಿಕ್ಷಣ ನೀಡಿ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸಬೇಕಿದ್ದ ಶಿಕ್ಷಕಿಯ ಅತಿರೇಕದ ಪ್ರವೃತ್ತಿ ಕೊನೆಗೆ ಆಕೆಯೂ ಸೇರಿದಂತೆ ಮತ್ತೊಬ್ಬನ ಸಾವಿಗೆ ಕಾರಣವಾಗಿದೆ. ಇಂಥದ್ದೊಂದು ಘಟನೆ ಹೈದರಾಬಾದ್‌ನ ಹಯಾತ್‌ನಗರದಲ್ಲಿ ನಡೆದಿದೆ.
ಘಟನೆಯ ವಿವರ: ಮುಳುಗು ಜಿಲ್ಲೆಯ ಪಂಚೋತಕುಲಪಲ್ಲಿಯ ರಾಜೇಶ್ (25) ಮೃತದೇಹ ಇದೇ ತಿಂಗಳ 29 ರಂದು ನಗರದ ಹೊರವಲಯದ ಹಯಾತ್‌ನಗರ ಸಮೀಪದ ಕುಂಟ್ಲೂರಿನಲ್ಲಿ ಪತ್ತೆಯಾಗಿತ್ತು. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಒಂದೇ ಒಂದು ಮಿಸ್ ಕಾಲ್ನಿಂದ ಎರಡು ಜೀವಗಳು ಬಲಿಯಾಗಿವೆ. ಸರ್ಕಾರಿ ಶಿಕ್ಷಕಿ (45) ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಹಯಾತ್‌ನಗರದಲ್ಲಿ ವಾಸಿಸುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ರಾಜೇಶನ ಮೊಬೈಲ್ಗೆ ಆಕೆಯಿಂದ ಮಿಸ್ಡ್ ಕಾಲ್ ಬಂದಿತ್ತು. ಒಬ್ಬರಿಗೊಬ್ಬರು ಶುಭಾಶಯ ಕೋರುವ ಮೂಲಕ ಇಬ್ಬರ ಪರಿಚಯವೂ ಆಗಿತ್ತು. ಶಿಕ್ಷಕಿ ತನಗೆ ಮದುವೆ ಆಗಿಲ್ಲ ಎಂದು ಹೇಳಿಕೊಂಡಿದ್ದಾಳೆ. ಇತ್ತ ಯುವಕನಿಗೂ ಮದುವೆಯಾಗಿಲ್ಲ. ಇವರಿಬ್ಬರೂ ಪ್ರತಿದಿನ ಗಂಟೆಗಟ್ಟಲೆ ಹರಟೆ ಶುರು ಮಾಡಿದ್ದರು. ವಿಶೇಷ ಬಾಂಧವ್ಯ ಏರ್ಪಟ್ಟು ಪ್ರೇಮಕ್ಕೆ ತಿರುಗಿದೆ. ನಲ್ಗೊಂಡ ಜಿಲ್ಲೆಯ ವಿವಿಧೆಡೆ ಇಬ್ಬರೂ ಒಟ್ಟಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಪ್ರತಿ ಬಾರಿ ಭೇಟಿಯಾದಾಗಲೂ ತನಗೆ ಮದುವೆಯಾಗಿಲ್ಲ ಎಂಬಂತೆ ಮಹಿಳೆ ಸಾಕಷ್ಟು ಎಚ್ಚರ ವಹಿಸುತ್ತಿದ್ದಳು. ಹೀಗಾಗಿ ರಾಜೇಶ್ ಆಕೆಯನ್ನು ಮದುವೆಯಾಗಲು ಬಯಸಿದ್ದಾನೆ. ಹೀಗೆ ಕೆಲ ದಿನಗಳ ನಂತರ ರಾಜೇಶ್‌ಗೆ ಆಕೆಗೆ ಒಬ್ಬ ಮಗಳು ಮತ್ತು ಒಬ್ಬ ಮಗನಿದ್ದು, ಅವರು ಮದುವೆಯಾಗಿದ್ದಾರೆ ಮತ್ತು ಉನ್ನತ ಶಿಕ್ಷಣವನ್ನು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆಕೆಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದುಕೊಂಡಿದ್ದ ಯುವಕ ಎರಡು ತಿಂಗಳಿಂದ ಅಂತರ ಕಾಯ್ದುಕೊಂಡಿದ್ದ. ಇದನ್ನು ಸಹಿಸದ ಆಕೆ ರಾಜೇಶನ ಮೊಬೈಲ್ಗೆ ವಾಟ್ಸಾಪ್ ಮೂಲಕ ಪದೇ ಪದೇ ‘ನೀನು ಇಲ್ಲದೆ ಬದುಕಲಾರೆ.. ಕ್ರಿಮಿನಾಶಕ ಕುಡಿದು ಸಾಯುವೆ’ ಎಂದೆಲ್ಲ ಸಂದೇಶ ಕಳುಹಿಸುತ್ತಿದ್ದಳು. ಇದೇ ತಿಂಗಳ 24 ರಂದು ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಕುಟುಂಬಸ್ಥರು ಪತ್ತೆ ಹಚ್ಚಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆ ಸೋಮವಾರ ಮಧ್ಯಾಹ್ನ ಮೃತಪಟ್ಟಿದ್ದಾಳೆ. ಆದ್ರೆ ಈ ವಿಷಯ ರಾಜೇಶ್‌ಗೆ ತಿಳಿದಿರಲಿಲ್ಲ.
ಸೆಲ್ಫೋನ್ ಸಂದೇಶಗಳು ಬಹಿರಂಗ: ಘಟನೆಯ ನಂತರ ಶಿಕ್ಷಕಿಯ ಮಗ ತನ್ನ ತಾಯಿಯ ಸೆಲ್ಫೋನ್ ವಾಟ್ಸಾಪ್ ಚಾಟ್‌ಗಳನ್ನು ಪರಿಶೀಲಿಸಿದಾಗ ಆಕೆಯ ಆತ್ಮಹತ್ಯೆಗೆ ರಾಜೇಶ್ ಕಾರಣ ಎಂದು ತೀರ್ಮಾನಕ್ಕೆ ಬಂದಿದ್ದಾನೆ. ಹೇಗಾದರೂ ಮಾಡಿ ಆತನನ್ನು ಗುರುತಿಸಲು ಸ್ನೇಹಿತರ ಸಹಾಯ ಕೋರಿದ್ದಾನೆ. ಆತನನ್ನು ಪತ್ತೆ ಮಾಡಲು ಮಗ ತನ್ನ ತಾಯಿಯಂತೆ ಯುವಕನಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿ ನಂಬಿಸಿದ್ದಾನೆ. ರಾಜೇಶ್ ಒಂದು ನಿರ್ದಿಷ್ಟ ಸ್ಥಳದಲ್ಲಿ ಭೇಟಿಯಾಗುವುದಾಗಿ ಸಂದೇಶ ಕಳುಹಿಸಿದ್ದಾನೆ. ರಾಜೇಶ್ ಹಯಾತ್ನಗರದ ಕುಂಟ್ಲೂರು ರಸ್ತೆಯಲ್ಲಿರುವ ಟೀ ಸ್ಟಾಲ್‌ನಲ್ಲಿ ಕಾಯುತ್ತಿದ್ದ. ಇಬ್ಬರು ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಬಂದ ಟೀಚರ್ ಪುತ್ರ ರಾಜೇಶ್ನನ್ನು ಭೇಟಿ ಆಗಿದ್ದಾನೆ. ಆ ಬಳಿಕ ಆತನನನ್ನು ಡಾಕ್ಟರ್ಸ್ ಕಾಲೋನಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ನಿನ್ನಿಂದಾಗಿ ನನ್ನ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹಲ್ಲೆ ನಡೆಸಿದ್ದಾನೆ. ಈ ಘಟನೆಯಿಂದ ತೀವ್ರ ಮನನೊಂದ ರಾಜೇಶ್ ಡಾಕ್ಟರ್ಸ್ ಕಾಲೋನಿಯ ಕಾಂಪೌಂಡ್ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ರಾಜೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ರಾಜೇಶ್ ಕುಟುಂಬಸ್ಥರನ್ನು ಪತ್ತೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ದೇಹದ ಆಂತರಿಕ ಭಾಗಗಳಲ್ಲಿ ಯಾವುದೇ ಗಾಯ ಅಥವಾ ರಕ್ತಸ್ರಾವದ ಲಕ್ಷಣಗಳಿಲ್ಲ ಎಂದು ವರದಿಯಾಗಿದೆ. ಆರಂಭದಲ್ಲಿ ಕೀಟನಾಶಕದ ಕುರುಹು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಹೊಟ್ಟೆಯಲ್ಲಾದ ಸ್ರಾವವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮಂಗಳವಾರ ಮಧ್ಯಾಹ್ನ ರಾಜೇಶ್ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಕುಟುಂಬಸ್ಥರು ರಾಜೇಶ್ ಮೃತದೇಹವನ್ನು ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಸಿದ್ದಾರೆ. ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಿದಾಗ ಈ ಮೇಲಿನ ಸಂಗತಿಗಳು ಬಯಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 'ತಂಬಾಕು ತ್ಯಜಿಸಿ': ವಿಶೇಷ ಮರಳು ಕಲಾಕೃತಿ ನೋಡಿ..