ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನಗಳಲ್ಲಿ ತನ್ನ ಅಸ್ತಿತ್ವವನ್ನು ವೇಗಗೊಳಿಸಲಿದೆ. ಇದರ ಭಾಗವಾಗಿ ಮುಂದಿನ ನಾಲ್ಕು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ 10 ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳನ್ನು ಹೊಂದುವ ಯೋಜನೆ ಇದೆ ಎಂದು ಕಂಪೆನಿಯ ಅಧ್ಯಕ್ಷ ಎನ್.ಚಂದ್ರಶೇಖರನ್ ತಿಳಿಸಿದ್ದಾರೆ.
76 ನೇ ವಾರ್ಷಿಕ ಸಭೆಯಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರನ್, "ಭಾರತದಲ್ಲಿ, ನಮ್ಮ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಪೋರ್ಟ್ಫೋಲಿಯೋ ಈ ವರ್ಷ 2 ಪ್ರತಿಶತಕ್ಕೆ ಏರಿಕೆಯಾಗಿದೆ. ಮುಂಬರುವ ವರ್ಷಗಳಲ್ಲಿ ಈ ಪ್ರಮಾಣ ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಈ ಬದಲಾವಣೆಗೆ ಕಾರಣವಾಗಲಿದೆ. 2025 ರ ಹೊತ್ತಿಗೆ ಟಾಟಾ ಮೋಟಾರ್ಸ್ 10 ಹೊಸ ಬಿಇವಿ ವಾಹನಗಳನ್ನು ಮಾರುಕಟ್ಟೆಗೆ ತರಲಿದೆ" ಎಂದು ಹೇಳಿದರು.
ಟಾಟಾ ಮೋಟಾರ್ಸ್ ಮಾರುಕಟ್ಟೆಯಲ್ಲಿ ಎರಡು ಸಂಪೂರ್ಣ ವಿದ್ಯುತ್ ಮಾದರಿಗಳಾದ ನೆಕ್ಸನ್ ಇವಿ ಮತ್ತು ಟೈಗರ್ ಇವಿ ಹೊಂದಿರುವ ದೇಶದ ಅತಿದೊಡ್ಡ ಇವಿ ಪ್ಲೇಯರ್ ಆಗಿದೆ. ಆಲ್ಟ್ರೊಜ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಮುಂದಿನ ತಿಂಗಳುಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ನೆಕ್ಸನ್ ಇವಿ ಭಾರತದ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನವಾಗಿದ್ದು, ಜನವರಿ 2020 ರಲ್ಲಿ ಪ್ರಾರಂಭವಾದಾಗಿನಿಂದ 4,000 ಕ್ಕೂ ಹೆಚ್ಚು ಘಟಕಗಳ ಮಾರಾಟವನ್ನು ಹೊಂದಿದೆ.
ಎರಡು ಬ್ರಿಟಿಷ್ ಐಷಾರಾಮಿ ವಾಹನ ತಯಾರಕರಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್‌ಗೂ ಇದೇ ರೀತಿಯ ಇವಿ ಬದಲಾವಣೆಯನ್ನು ಪ್ರೋಗ್ರಾಮ್ ಮಾಡಲಾಗಿದೆ. ಜಾಗ್ವಾರ್ 2025 ರ ವೇಳೆಗೆ ಆಲ್-ಎಲೆಕ್ಟ್ರಿಕ್ ಐಷಾರಾಮಿ ಬ್ರಾಂಡ್ ಆಗಲಿದೆ. ಲ್ಯಾಂಡ್ ರೋವರ್ ನಂತರ 2030 ರ ವೇಳೆಗೆ ತನ್ನ ಮಾರಾಟದ 60 ಪ್ರತಿಶತವನ್ನು ಇವಿಗಳಿಂದ ಉತ್ಪಾದಿಸುವ ಗುರಿ ಹೊಂದಿದೆ.
ಭಾರತ ಮತ್ತು ಹೊರದೇಶಗಳಲ್ಲಿ ಸೆಲ್ ಮತ್ತು ಬ್ಯಾಟರಿ ತಯಾರಿಕೆಯಲ್ಲಿ ಪಾಲುದಾರಿಕೆಗಳನ್ನು ಅನ್ವೇಷಿಸುವುದರ ಜೊತೆಗೆ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸ್ಥಾಪಿಸಲು ಟಾಟಾ ಗ್ರೂಪ್ ಹೂಡಿಕೆ ಮಾಡಲಿದೆ.
"ಒಂದು ಗುಂಪಾಗಿ ನಾವು ದೇಶಾದ್ಯಂತ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸ್ಥಾಪಿಸಲು ಪೂರ್ವಭಾವಿಯಾಗಿ ಹೂಡಿಕೆ ಮಾಡುತ್ತೇವೆ. ಇದಲ್ಲದೆ, ನಮ್ಮ ಬ್ಯಾಟರಿಗಳ ಸರಬರಾಜನ್ನು ಭದ್ರಪಡಿಸಿಕೊಳ್ಳಲು ಟಾಟಾ ಗ್ರೂಪ್ ಭಾರತ ಮತ್ತು ಯುರೋಪಿನಲ್ಲಿ ಸೆಲ್ ಮತ್ತು ಬ್ಯಾಟರಿ ತಯಾರಿಕೆಯಲ್ಲಿ ಸಹಭಾಗಿತ್ವವನ್ನು ಸಕ್ರಿಯವಾಗಿ ಅನ್ವೇಷಿಸುತ್ತಿದೆ"ಎಂದು ಚಂದ್ರಶೇಖರನ್ ವಿವರಿಸಿದರು.