ಸೂರತ್(ಗುಜರಾತ್) : ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ಅಪರಾಧಿಗೆ ಗುಜರಾತ್ನ ಸೂರತ್ ನ್ಯಾಯಾಲಯವು ಮರಣ ದಂಡನೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ 23 ವರ್ಷದ ಅಪರಾಧಿಯು ಪುಟ್ಟ ಮಗುವನ್ನು ಅತ್ಯಾಚಾರ ಎಸಗಿ ಹತ್ಯೆಗೈದಿದ್ದ. ಈ ಬಗ್ಗೆ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯವು ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿದೆ. ಅಪರಾಧಿಯನ್ನು ಸೂರತ್ನ ಸಚಿನ್ ಪ್ರದೇಶದ ನಿವಾಸಿ ಇಸ್ಮಾಯಿಲ್ ಯೂಸುಫ್(23) ಎಂದು ಗುರುತಿಸಲಾಗಿದೆ.
ಅತ್ಯಾಚಾರ ಆರೋಪಿಗೆ ಮರಣ ದಂಡನೆ ವಿಧಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯವನ್ನು ಒತ್ತಾಯಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ಅಂತಿಮವಾಗಿ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ನಯನ್ ಸುಖ್ದವಾಲ್ ಮಾತನಾಡಿ, ಅಪರಾಧಿಗೆ ಯಾವುದೇ ಕರುಣೆಯನ್ನು ನ್ಯಾಯಾಲಯವು ತೋರಿಲ್ಲ. ಇದು ಅಪರೂಪದಲ್ಲಿ ಅಪರೂಪ ಪ್ರಕರಣವಾಗಿದೆ. ಅಪರಾಧಿಗೆ ಮರಣದಂಡನೆ ವಿಧಿಸಲಾಗಿದೆ. ಇದೇ ವೇಳೆ ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.
2 ವರ್ಷದ ಹಸುಗೂಸಿನ ಮೇಲೆ ಅತ್ಯಾಚಾರ : ಕಳೆದ ಫೆಬ್ರವರಿ 27 ರಂದು ಸೂರತ್ನ ಸಚಿನ್ ಎಂಬಲ್ಲಿ ಮನೆಯಿಂದ ಮಗುವೊಂದು ನಾಪತ್ತೆಯಾಗಿತ್ತು. ಈ ಸಂಬಂಧ ಮಗುವಿನ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಬಳಿಕ ಮಗು ಎಲ್ಲಿಯೂ ಪತ್ತೆಯಾಗದ ಹಿನ್ನೆಲೆ ಗಾಬರಿಗೊಂಡ ಪೋಷಕರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು, ಮಗುವಿನ ಪತ್ತೆಗೆ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಇಲ್ಲಿನ ಪೊದೆಯೊಂದರಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಪುಟ್ಟ ಮಗುವಿನ ದೇಹದ ಮೇಲೆ ಗಾಯಗಳಾಗಿದ್ದವು. ಜೊತೆಗೆ ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿ ಪೊಲೀಸರಿಗೆ ಗೊತ್ತಾಗಿದೆ. ಬಳಿಕ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರಿಗೆ, ವೇಳೆ ಪಕ್ಕದ ಮನೆಯ ಯುವಕನೋರ್ವ ಮಗುವನ್ನು ಅಪಹರಿಸಿ ಅತ್ಯಾಚಾರ ಮಾಡಿ ಬಳಿಕ ಪೊದೆಯ ಬಳಿ ಶವವನ್ನು ಎಸೆದಿರುವುದು ಗೊತ್ತಾಗಿದೆ.
ಅಲ್ಲದೆ ಆರೋಪಿ ಹೆಚ್ಚಾಗಿ ಆಶ್ಲೀಲ ವಿಡಿಯೋವನ್ನು ನೋಡುತ್ತಿದ್ದ. ಜೊತೆಗೆ ಆರೋಪಿಯು ತನ್ನ ನೀಚ ಕೃತ್ಯವನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ನಡೆದ 11 ದಿನದೊಳಗಾಗಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಇದೀಗ ಸೂರತ್ ನ್ಯಾಯಾಲಯ ಅತ್ಯಾಚಾರ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ : ಕೇರಳದಲ್ಲಿ ಅಮೆರಿಕದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಇಬ್ಬರು ಆರೋಪಿಗಳ ಬಂಧನ