ಸೂರತ್ (ಗುಜರಾತ್): ಚಂದ್ರಯಾನ-3 ದೇಶದ ಮಹತ್ವಾಕಾಂಕ್ಷೆ ಯೋಜನೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಮೊದಲ ಬಾರಿಗೆ ಗಗನನೌಕೆ ಇಳಿಸಿ ಇತಿಹಾಸ ಸೃಷ್ಟಿಸಲಾಗಿದೆ. ಇದರಿಂದ ಇಡೀ ಜಗತ್ತೇ ಬೆರಗಾಗಿ ಭಾರತದತ್ತ ನೋಡುತ್ತಿದೆ. ಇದರ ನಡುವೆ ಗುಜರಾತ್ನಲ್ಲಿ ವ್ಯಕ್ತಿಯೊಬ್ಬ ಚಂದ್ರಯಾನ-3ರ ಲ್ಯಾಂಡರ್ ಮಾಡ್ಯೂಲ್ಅನ್ನು ನಾನೇ ವಿನ್ಯಾಸ ಮಾಡಿದ್ದು ಎಂದು ಹೇಳಿಕೊಂಡಿದ್ದಾನೆ. ಇದು ಅನುಮಾನಕ್ಕೆ ಎಡೆ ಮಾಡಿಕೊಂಡಿದ್ದು, ಈ ವ್ಯಕ್ತಿಯ ಕುರಿತು ಸೂರತ್ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಗಗನನೌಕೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಯಶಸ್ವಿಯಾಗಿ ಉಡಾಯಿಸಿದ್ದರು. ಇದಾದ 41 ದಿನಗಳ ನಂತರ ಎಂದರೆ, ಆಗಸ್ಟ್ 23ರಂದು ಸಂಜೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಇಳಿಸಿದ್ದಾರೆ. ಈ ಮೂಲಕ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆ ಇಳಿಸಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಮುಖ್ಯವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಗನನನೌಕೆ ಇಳಿಸಿ ಚರಿತ್ರೆ ಬರೆಯಲಾಗಿದೆ.
ಇದಾದ ನಂತರ ಗುರುವಾರ ಗುಜರಾತ್ನ ಸೂರತ್ ನಿವಾಸಿಯಾದ ಮಿಥುಲ್ ತ್ರಿವೇದಿ ಎಂಬಾತ ''ನಾನು ಇಸ್ರೋ ವಿಜ್ಞಾನಿ. ನಾನೇ ಚಂದ್ರಯಾನ -3ರ ಲ್ಯಾಂಡರ್ ಮಾಡ್ಯೂಲ್ ವಿನ್ಯಾಸಗೊಳಿಸಿದ್ದೇನೆ'' ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ''ನಾನು ಚಂದ್ರಯಾನ-2 ಮಿಷನ್ನ ಭಾಗವೂ ಆಗಿದ್ದೆ. ಇದರಿಂದ ಇತ್ತೀಚಿನ ಚಂದ್ರನ ಮಿಷನ್ನಲ್ಲಿ ಕೆಲಸ ಮಾಡಲು ನನಗೆ ಇಸ್ರೋ ಆಹ್ವಾನಿಸಿತ್ತು. ಲ್ಯಾಂಡರ್‌ನ ಮೂಲ ವಿನ್ಯಾಸದಲ್ಲಿ ನಾನು ಹಲವು ಬದಲಾವಣೆಗಳನ್ನು ಮಾಡಿದ್ದೇನೆ. ಅದು ಯಶಸ್ವಿಯಾಗಿ ಇಳಿಯಲು ಕಾರಣವಾಗಿದೆ'' ಎಂದು ಮಿಥುಲ್ ತ್ರಿವೇದಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ. ಆದರೆ, ಕೆಲವು ಸ್ಥಳೀಯ ಪತ್ರಿಕೆಗಳು ಶುಕ್ರವಾರ ಮಿಥುಲ್ ತ್ರಿವೇದಿ ಹೇಳಿಕೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸುವ ವರದಿಗಳನ್ನು ಪ್ರಕಟಿಸಿವೆ.
ಇದರಿಂದ ಈ ಮಿಥುಲ್ ತ್ರಿವೇದಿ ಹಾಗೂ ಈತನ ಹೇಳಿಕೆಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಅಂತೆಯೇ, ಪೊಲೀಸರು ಈತನ ಕುರಿತು ತನಿಖೆ ಆರಂಭಿಸಿದ್ದಾರೆ. ಶುಕ್ರವಾರ ತನ್ನ ಹೇಳಿಕೆ ಕುರಿತು ಸೂಕ್ತ ಪುರಾವೆಗಳನ್ನು ಒದಗಿಸುವಂತೆ ಪೊಲೀಸರು ಸೂಚಿಸಿ, ವಿಚಾರಣೆಗೂ ಒಳಪಡಿಸಿದ್ದಾರೆ. ಈ ಕುರಿತು ಪೊಲೀಸ್ ಉಪ ಆಯುಕ್ತರಾದ (ವಿಶೇಷ ಶಾಖೆ) ಹೇತಲ್ ಪಟೇಲ್ ಪ್ರತಿಕ್ರಿಯಿಸಿ, ''ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಾಗಿನಿಂದ ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿರುವ ಮಿಥುಲ್ ತ್ರಿವೇದಿ ಬಗ್ಗೆ ನಗರ ಪೊಲೀಸ್ ಕಮಿಷನರ್ ಅಜಯ್ ತೋಮರ್ ಅವರು ತನಿಖೆ ನಡೆಸುವಂತೆ ಅಪರಾಧ ವಿಭಾಗಕ್ಕೆ ನಿರ್ದೇಶಿಸಿದ್ದಾರೆ'' ಎಂದು ತಿಳಿಸಿದ್ದಾರೆ.
''ಆದ್ದರಿಂದ ತನ್ನ ಹೇಳಿಕೆಗಳನ್ನು ಸಾಬೀತುಪಡಿಸಲು ದಾಖಲೆಗಳೊಂದಿಗೆ ಶುಕ್ರವಾರ ನಮ್ಮ ಕಚೇರಿಗೆ ಬರುವಂತೆ ಮಿಥುಲ್ ತ್ರಿವೇದಿಗೆ ಸೂಚಿಸಲಾಗಿತ್ತು. ಆದರೆ, ಈತ ಇಸ್ರೋದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಯಾವುದೇ ದಾಖಲೆ ಅಥವಾ ಪುರಾವೆಗಳನ್ನು ನೀಡಲಿಲ್ಲ. ನಮ್ಮ ತನಿಖೆಯಲ್ಲಿ ಈತ ಕೇವಲ ಬಿ.ಕಾಂ. ಪದವಿ ಹೊಂದಿರುವುದು ಕಂಡುಬಂದಿದೆ'' ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಮುಂದುವರೆದು, ''ವಿಜ್ಞಾನಿ ಎಂಬ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ಇಸ್ರೋದ ಬೆಂಗಳೂರಿನ ಕಚೇರಿಯಲ್ಲಿ ಚಂದ್ರಯಾನ-3ರ ವಿನ್ಯಾಸದಲ್ಲಿ ಕೆಲಸ ಮಾಡಿದ ಫ್ರೀಲಾನ್ಸರ್ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ನಾಸಾದೊಂದಿಗೆ ಕೆಲಸ ಮಾಡುತ್ತಿರುವುದಾಗಿಯೂ ಹೇಳಿಕೊಳ್ಳುತ್ತಿದ್ದಾನೆ. ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ, ಮಿಥುಲ್ ತ್ರಿವೇದಿ ಇಸ್ರೋ ವಿಜ್ಞಾನಿ ಅಲ್ಲ. ಈ ಕುರಿತು ಅಪರಾಧ ವಿಭಾಗದಿಂದ ಹೆಚ್ಚಿನ ತನಿಖೆ ನಡೆಸಲಾಗುವುದು. ಈತನ ಹೇಳಿದ್ದು ಸುಳ್ಳು ಎಂದು ಕಂಡುಬಂದರೆ ಎಫ್ಐಆರ್ ದಾಖಲಿಸಲಾಗುವುದು" ಎಂದು ಡಿಸಿಪಿ ಹೇತಲ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. (ಪಿಟಿಐ)
ಇದನ್ನೂ ಓದಿ: ಲ್ಯಾಂಡರ್ ಸೆರೆಹಿಡಿದ ಚಂದ್ರನ ಚಿತ್ರಗಳ ವಿಡಿಯೋ ಬಿಡುಗಡೆಗೊಳಿಸಿದ ಇಸ್ರೋ-ನೋಡಿ