ಬಾಹ್ಯ ಆಕ್ರಮಣ ಮತ್ತು ಆಂತರಿಕ ಉತ್ಪಾತದಿಂದ ರಾಜ್ಯವನ್ನು ರಕ್ಷಿಸುವುದು ಹಾಗೂ ಸಂವಿಧಾನದ ಪ್ರಕಾರ ಪ್ರತಿ ರಾಜ್ಯ ಸರ್ಕಾರವೂ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಖಚಿತಪಡಿಸುವುದು ಕೇಂದ್ರದ ಕರ್ತವ್ಯ ಎಂದು ಭಾರತೀಯ ಸಂವಿಧಾನದ 355ನೇ ಕಲಂ ಉಲ್ಲೇಖಿಸಿದೆ.
ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಸಿಕ್ಕಿ ರಾಜ್ಯಗಳು ಒದ್ದಾಡುತ್ತಿರುವ ಈ ಸಮಯದಲ್ಲಿ ಕೇಂದ್ರ ಸರ್ಕಾರ ಏನು ಮಾಡುತ್ತಿದೆ. ರಾಜ್ಯಗಳಲ್ಲಿ ಅತ್ಯಧಿಕ ಮೃತ ಪ್ರಕರಣಗಳು ಮತ್ತು ಪಾಸಿಟಿವ್ ಕೇಸ್ಗಳು ದಾಖಲಾಗಿವೆ.
ದೇಶದ 741 ಜಿಲ್ಲೆಗಳಲ್ಲಿರುವ 301 ಸ್ಥಳಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣವು ಶೇ.20ಕ್ಕಿಂತ ಹೆಚ್ಚಾಗಿದೆ ಎಂದು ಅಂಕಿ-ಅಂಶವು ತಿಳಿಸುತ್ತದೆ.
ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದ ಸುದ್ದಿ ಪತ್ರದ ಪ್ರಕಾರ, ಸಾಂಕ್ರಾಮಿಕ ರೋಗವು ಆಸ್ಸೋಂ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್ ಮತ್ತು ಇತರ ರಾಜ್ಯಗಳಲ್ಲಿ ವ್ಯಾಪಕವಾಗುತ್ತಿದೆ.
ಕರ್ನಾಟಕದಲ್ಲಿ ಸಾಂಕ್ರಾಮಿಕ ರೋಗದ ಸ್ಥಿತಿ ಹೇಗಿದೆ ಎಂದರೆ, ಪ್ರತಿ ಬೆಡ್‌ಗೆ ಕನಿಷ್ಠ 30 ರೋಗಿಗಳು ಕಾಯುತ್ತಿದ್ದಾರೆ. ನೀತಿ ಆಯೋಗದ ಸದಸ್ಯ ವಿ.ಕೆ ಪಾಲ್ ನೇತೃತ್ವದ ಸಮಿತಿಯು ರೂಪಿಸಿದ ಮಾದರಿಯಲ್ಲಿ ಆಮ್ಲಜನಕವನ್ನು ರಾಜ್ಯಗಳಿಗೆ ವಿತರಿಸುವ ಕೇಂದ್ರದ ಪ್ರಸ್ತಾಪವನ್ನು ಸುಪ್ರೀಂಕೋರ್ಟ್ ಒಮ್ಮತದಿಂದ ತಿರಸ್ಕರಿಸಿದೆ.
ಈ ನಿಟ್ಟಿನಲ್ಲಿ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ನೇಮಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಕಳೆದ ಮಾರ್ಚ್‌ನಲ್ಲಿ 12 ಸದಸ್ಯರ ಕಾರ್ಯಪಡೆಯನ್ನು ಕೇಂದ್ರ ನೇಮಿಸಿದ್ದರೂ, ಸಮಿತಿಯು ಕೇವಲ ನಾಮ್‌ಕೇವಾಸ್ತೆ ಇದೆ.
ದೇಶದಲ್ಲಿ ಪ್ರತಿ ದಿನ ವರದಿಯಾದ ಪ್ರಕರಣವು 500 ಇದ್ದಾಗ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿತ್ತು. ಆದರೆ ಈಗ ಪ್ರಕರಣ 4 ಲಕ್ಷಕ್ಕೆ ಏರಿಕೆಯಾದರೂ ಸರ್ಕಾರ ಮೂಕಪ್ರೇಕ್ಷಕವಾಗಿದೆ ಎಂಬುದೇ ಆ ಕಾರ್ಯಪಡೆಯ ಪರಿಣಾಮಕಾರಿತ್ವವನ್ನು ಹೇಳುತ್ತದೆ.
ಗಣಿತದ ಮಾದರಿಯನ್ನು ಆಧರಿಸಿ ಸಾಂಕ್ರಾಮಿಕದ ತೀವ್ರತೆಯನ್ನು ವಿಶ್ಲೇಷಿಸಲು ಕಳೆದ ಮೇಯಲ್ಲಿ ಸೂಪರ್ ಮಾಡೆಲ್ ಸಮಿತಿಯನ್ನು ನೇಮಿಸಲಾಗಿತ್ತು. ಎರಡನೇ ಅಲೆ ಹರಡುವ ಬಗ್ಗೆ ಸಮಿತಿ ನೀಡಿದ ಎಚ್ಚರಿಕೆಗೆ ಕೇಂದ್ರ ಸರ್ಕಾರ ಯಾವುದೇ ಮನ್ನಣೆ ನೀಡಲಿಲ್ಲ.
ಮಾನವ ನಿರ್ಮಿತ ವಿಪತ್ತು ಇಡೀ ದೇಶವನ್ನು ವ್ಯಾಪಿಸುತ್ತಿದ್ದಂತೆಯೇ, ಈಗ ಸುಪ್ರೀಂಕೋರ್ಟ್ ಮಾತ್ರವೇ ಸರಿಯಾದ ದಿಕ್ಕನ್ನು ತೋರಿಸಬೇಕಾಗಿದೆ.
ಕೊರೊನಾ ವಿರುದ್ಧದ ದೇಶದ ಹೋರಾಟವು ಜನರ ಚಳವಳಿಯಾಗಿದೆ ಮತ್ತು ಜನರ ಜೀವವನ್ನು ಉಳಿಸುತ್ತಿರುವ ಯಶಸ್ವಿ ದೇಶಗಳ ಪೈಕಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಜನವರಿಯಲ್ಲಿ ಹೇಳಿದ್ದರು.
ಕಳೆದ ಡಿಸೆಂಬರ್‌ನಲ್ಲಿ ಕೊರೊನಾ ವೈರಸ್‌ನ ವೈರಲ್ ಮ್ಯುಟೇಶನ್‌ಗಳನ್ನು ಅಧ್ಯಯನ ನಡೆಸಲು 10 ಪ್ರತಿಷ್ಠಿತ ಸಂಸ್ಥೆಗಳನ್ನು ಸೇರಿಸಿ 'ಜೆನೆಟಿಕ್ಸ್ ಒಕ್ಕೂಟ' ವನ್ನು ರಚಿಸಲಾಗಿತ್ತು. ಶೀಘ್ರದಲ್ಲೇ ವೈರಸ್ ಪುನಃ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ ಈ ಒಕ್ಕೂಟ ವರದಿ ಸಲ್ಲಿಸಿತ್ತು.
ದೇಶದಲ್ಲಿ ಕೋವಿಡ್ ಇಳಿಕೆಯಾಗುತ್ತಿದೆ ಎಂದು ಮಾರ್ಚ್‌ನ ಮೊದಲ ವಾರದಲ್ಲಿ ಕೇಂದ್ರ ಆರೋಗ್ಯ ಸಚಿವರು ಘೋಷಿಸಿದ ಎರಡು ದಿನ ಮೊದಲು ಈ ವರದಿಯನ್ನು ಸಲ್ಲಿಸಲಾಗಿತ್ತು.
ಸೆಲ್ಯುಲಾರ್ ಮತ್ತು ಮಾಲೆಕ್ಯುಲರ್ ಬಯಾಲಜಿಯ ಮಾಜಿ ನಿರ್ದೇಶಕ ರಾಕೇಶ್ ಮಿಶ್ರಾ ಹೇಳುವಂತೆ, ಈ ವರದಿಯ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾದ್ದರಿಂದ ಈ ಸನ್ನಿವೇಶ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಅಧ್ಯಯನ ವರದಿಗಳ ಹಿನ್ನೆಲೆಯಲ್ಲಿ, ಜನರಲ್ಲಿ ಇದು ಹೆಚ್ಚು ಹೆಚ್ಚು ವ್ಯಾಪಿಸುತ್ತಿದ್ದಂತೆ ಇನ್ನಷ್ಟು ರೂಪಾಂತರಗಳನ್ನು ವೈರಸ್ ಪಡೆದುಕೊಳ್ಳಲಿದೆ. ಸಾಂಕ್ರಾಮಿಕ ರೋಗದ ಮೂರನೇ ಅಲೆ ನಿಶ್ಚಿತ ಎಂದು ವಿಶ್ಲೇಷಣೆ ಮಾಡಲಾಗಿದೆ.
ಈ ವಿಷಯವನ್ನು ಉಲ್ಲೇಖಿಸುತ್ತಾ, ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಆಮ್ಲಜನಕ ಪೂರೈಕೆಯನ್ನು ಖಚಿತಪಡಿಸಲು ವೈಜ್ಞಾನಿಕ ಮತ್ತು ಔಚಿತ್ಯಪೂರ್ಣ ನೀತಿಯನ್ನು ರೂಪಿಸುವ ಜವಾಬ್ದಾರಿಯನ್ನು ಕಾರ್ಯಪಡೆಗೆ ಸುಪ್ರೀಂಕೋರ್ಟ್ ನೀಡಿದೆ.
ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಔಷಧಗಳ ಲಭ್ಯತೆಯ ಮೇಲೆ ಕಾರ್ಯಪಡೆ ಗಮನ ಹರಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಸಾಂಕ್ರಾಮಿಕ ರೋಗಗಳ ಕುರಿತ ಪರಿಣಿತರು ಮತ್ತು ತಜ್ಞರನ್ನು ಕಾರ್ಯಪಡೆಯಲ್ಲಿ ಒಳಗೊಂಡಿದ್ದರೆ ಇನ್ನೂ ಉತ್ತಮವಾಗಿತ್ತು.
ಸಾಂಕ್ರಾಮಿಕದ ವಿರುದ್ಧದ ಹೋರಾಟವು ಮಹಾಯಜ್ಞದ ರೀತಿ ನಡೆಯಬೇಕಿದೆ. ವಿಜ್ಞಾನಿಗಳು ಮತ್ತು ವಿವಿಧ ವಿಭಾಗಗಳ ಸಹಕಾರದಲ್ಲಿ ಇದು ನಡೆಯಬೇಕು. ಸರ್ಕಾರ ಈ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲವಾಗಿರುವುದು ಮತ್ತು ನ್ಯಾಯಾಂಗದ ನಿರ್ದೇಶನಗಳಿಗಾಗಿ ನಿರೀಕ್ಷಿಸುತ್ತಿರುವುದು ದುರದೃಷ್ಟಕರವಾಗಿದೆ.