ನವದೆಹಲಿ: ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿ ವಿದ್ಯಾರ್ಥಿಗಳಿಂದ ಶಿಕ್ಷಕಿಯೊಬ್ಬರು ಕಪಾಳಮೋಕ್ಷ ಮಾಡಿಸಿದ ಪ್ರಕರಣದ ಸಂಬಂಧ ದಾಖಲಾಗಿರುವ ಎಫ್‌ಐಆರ್‌ನ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಶಾಲೆಯಲ್ಲಿ ಏಳು ವರ್ಷದ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಸಹಪಾಠಿ ವಿದ್ಯಾರ್ಥಿಗಳಿಗೆ ಶಿಕ್ಷಕಿಯೊಬ್ಬರು ಸೂಚಿಸುವ ವಿಡಿಯೋವೊಂದು ವೈರಲ್ ಆಗಿ ದೇಶದಾದ್ಯಂತ ಆಕ್ರೋಶಕ್ಕೆ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ಪೀಠ ನಡೆಸಿತು.
ಈ ವೇಳೆ, ಮುಜಾಫರ್‌ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ವರದಿಯನ್ನು ಪೀಠ ಕೇಳಿದೆ. ಈ ಪ್ರಕರಣದ ತನಿಖೆಯ ಸ್ಥಿತಿ ಮಾಹಿತಿಯನ್ನೂ ಸಲ್ಲಿಸುವಂತೆ ಸೂಚನೆ ನೀಡಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ.
ಮುಜಾಫರ್‌ನಗರ ಘಟನೆಯಲ್ಲಿ ಮಕ್ಕಳ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮತ್ತು ಮಕ್ಕಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ನಿರ್ದೇಶನ ಪಾಲನೆ ಕುರಿತು ತುಷಾರ್ ಗಾಂಧಿ ಪರ ವಕೀಲ ಶಾದನ್ ಫರಾಸತ್ ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ ಅರ್ಜಿಯು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯವಾಗಿದೆ. ಅದು ಸುಸಂಸ್ಕೃತ ಮತ್ತು ಬಹುತ್ವ ಸಮಾಜದ ಮೂಲಕ್ಕೆ ಸಂಬಂಧಿಸಿದೆ ಅಂದರೆ ಶಾಲಾ ವ್ಯವಸ್ಥೆಗಳು ಸೇರಿದಂತೆ ದೇಶದ ವಿವಿಧ ಧಾರ್ಮಿಕ ಗುಂಪುಗಳ ಸದಸ್ಯರ ನಡುವೆ ಶಾಂತಿ ಮತ್ತು ಸಾಮರಸ್ಯವನ್ನು ಖಾತ್ರಿಪಡಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
2023ರ ಆಗಸ್ಟ್ 24ರಂದು ಮುಜಫರ್‌ನಗರ ಗ್ರಾಮದ ನೇಹಾ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರು/ಶಾಲೆಯ ಪ್ರಾಂಶುಪಾಲರಾದ ತೃಪ್ತಿ ತ್ಯಾಗಿ ಅವರ ಸೂಚನೆ ಮೇರೆಗೆ ಏಳು ವರ್ಷದ ಬಾಲಕನಿಗೆ ಸಹ ವಿದ್ಯಾರ್ಥಿಗಳು ಕಪಾಳಮೋಕ್ಷ ಮಾಡಿದ ಅಸ್ಪಷ್ಟ ವಿಡಿಯೋ ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ತನಗೆ ತೊಂದರೆಯಾಗುತ್ತಿದೆ. ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಾಲಕ ದೂರಿದ್ದಾನೆ ಎಂದು ಅರ್ಜಿಯಲ್ಲಿ ಸೇರಿಸಲಾಗಿದೆ. ಮತ್ತೊಂದೆಡೆ, ಇದೇ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ ಪ್ರಕರಣ: ಯುಪಿ ಸರ್ಕಾರಕ್ಕೆ ನೊಟೀಸ್