ನವದೆಹಲಿ: ಬಿಲ್ಕಿಸ್ ಬಾನೊ ಮತ್ತು ಆಕೆಯ ಕುಟುಂಬ ಸದಸ್ಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಹನ್ನೊಂದು ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆಗೊಳಿಸಿ ಹೊರಡಿಸಿದ ಆದೇಶವನ್ನು ಇಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಈ ರೀತಿಯ ಬಿಡುಗಡೆ ಆದೇಶ ಹೊರಡಿಸುವ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇಲ್ಲ. ಈ ಅಧಿಕಾರ ಇರುವುದು ಮಹಾರಾಷ್ಟ್ರ ಸರ್ಕಾರಕ್ಕೆ ಎಂದು ಕೋರ್ಟ್ ಹೇಳಿತು.
"ಆರೋಪಿಗಳ ವಿಚಾರಣೆ ಮತ್ತು ಜೈಲುವಾಸ ನಡೆದ ಸ್ಥಳದಲ್ಲಿಯೇ ಬಿಡುಗಡೆ ಅರ್ಜಿಗಳ ಕುರಿತು ತೀರ್ಮಾನ ಕೈಗೊಳ್ಳಬೇಕು" ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾ.ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ಈ ತೀರ್ಪು ಹೊರಹಾಕಿದೆ.
ಬಿಲ್ಕಿಸ್ ಬಾನೊ ಪ್ರಕರಣದ 11 ಅಪರಾಧಿಗಳು ಮುಂದಿನ ಎರಡು ವಾರಗಳಲ್ಲಿ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆಯೂ ಕೋರ್ಟ್ ಇದೇ ವೇಳೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
2002ರ ಗುಜರಾತ್ ಗಲಭೆಯಲ್ಲಿ 21 ವರ್ಷದ ಬಿಲ್ಕಿಸ್ ಬಾನೊ ಅತ್ಯಾಚಾರಕ್ಕೊಳಗಾಗಿದ್ದರು. ಐದು ತಿಂಗಳ ಗರ್ಭಿಣಿಯಾಗಿದ್ದ ಇವರ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮೂರು ವರ್ಷದ ಮಗಳು ಸೇರಿದಂತೆ ಬಿಲ್ಕಿಸ್ ಕುಟುಂಬದ ಏಳು ಸದಸ್ಯರು ಗಲಭೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಕರಣದಲ್ಲಿ ಹನ್ನೊಂದು ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಗುಜರಾತ್ ಸರ್ಕಾರವು 2022ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಬಿಡುಗಡೆ ಮಾಡಿತ್ತು.
ಈ ನಿರ್ಧಾರವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ವೇಳೆ ಕೋರ್ಟ್, ಗುಜರಾತ್ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸದೆ ಅಪರಾಧಿಗಳನ್ನು ಬಿಡುಗಡೆ ಮಾಡುವುದು ಸರಿಯಲ್ಲ ಎಂದು ಹೇಳಿದೆ. ಬಿಡುಗಡೆಗೂ ನೀಡುವ ಮುನ್ನ ಅಪರಾಧಿಗಳ ಅಪರಾಧದ ಗಂಭೀರತೆಯನ್ನು ಪರಿಶೀಲಿಸಬೇಕು ಎಂದು ಸ್ಪಷ್ಟಪಡಿಸಿದೆ. ಇಂಥ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ.
ಇತರ ಅರ್ಜಿಗಳ ವಿಚಾರಣೆ: 2002ರ ಗುಜರಾತ್ ಗಲಭೆಯಲ್ಲಿ ಕುಟುಂಬ ಸದಸ್ಯರ ಹತ್ಯೆ ಮತ್ತು ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಮುಗಿಸಿದ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಕಾಯ್ದಿರಿಸಿತ್ತು. ಅಪರಾಧಿಗಳ ಬಿಡುಗಡೆಯ ವೇಳೆಯ ದಾಖಲೆಗಳನ್ನು ಸಲ್ಲಿಸಲು ಕೇಂದ್ರ ಮತ್ತು ಗುಜರಾತ್ ಸರ್ಕಾರಕ್ಕೆ ಸೂಚಿಸಿತ್ತು. ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಸಲ್ಲಿಸಿರುವ ಅರ್ಜಿಯ ಜೊತೆಗೆ, ಸಿಪಿಐ (ಎಂ) ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್ ಮತ್ತು ಲಖನೌ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ರೂಪ್ ರೇಖಾ ವರ್ಮಾ ಸೇರಿದಂತೆ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಕೂಡ ನಡೆದಿತ್ತು.