ಅಮೃತಸರ/ಪಂಜಾಬ್: ರಾಜ್ಯ ವಿಶೇಷ ಸೆಲ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಐಎಸ್‌ಐ ಜೊತೆ ಕೆಲಸ ಮಾಡುತ್ತಿದ್ದ ಭಾರತೀಯ ಯೋಧನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗುಜರಾತ್ ನಿವಾಸಿ ಕುನಾಲ್ ಕುಮಾರ್ ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಆರೋಪಿಯನ್ನು ಫಿರೋಜ್‌ಪುರದಲ್ಲಿ ಐಎಸ್‌ಐ ನಿಯೋಜಿಸಿದೆ ಮತ್ತು ಪಾಕಿಸ್ತಾನದ ಐಟಿ ಸೆಲ್‌ನಲ್ಲಿ ಕೆಲಸ ಮಾಡುವಾಗ ಭಾರತೀಯ ಸೇನೆಯ ಪ್ರಮುಖ ಮಾಹಿತಿಯನ್ನು ಈತ ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ರಾಜ್ಯ ವಿಶೇಷ ಸೆಲ್‌ನಲ್ಲಿ ಪ್ರಕರಣ ದಾಖಲಾದ ನಂತರ ತನಿಖೆ ಚುರುಕುಗೊಂಡಿತ್ತು.
ಪಾಕಿಸ್ತಾನದ ಮಹಿಳಾ ಗುಪ್ತಚರ ಅಧಿಕಾರಿ ಫೇಸ್‌ಬುಕ್‌ನಲ್ಲಿ ಈತನೊಂದಿಗೆ ಸ್ನೇಹ ಬೆಳೆಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಸ್ನೇಹ ಕ್ರಮೇಣ ವಾಟ್ಸ್ಯಾಪ್ ಚಾಟ್ವರೆಗೂ ಬಂದಿದೆ. ಮುಂದುವರಿದು ಇಬ್ಬರೂ ಫೋನ್ನಲ್ಲಿ ಮಾತನಾಡುವವರೆಗೆ ತಲುಪಿತ್ತು. ನಂತರ ಅವರು ಭಾರತೀಯ ಸೇನೆಯ ರಹಸ್ಯ ವಿಚಾರಗಳನ್ನು ಪಾಕಿಸ್ತಾನದ ಈ ಅಧಿಕಾರಿಯೊಂದಿಗೆ ಹಂಚಿಕೊಳ್ಳುತ್ತಿದ್ದರು.
ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಆತನನ್ನು ನಾಲ್ಕು ದಿನಗಳ ಕಾಲ ವಶಕ್ಕೆ ಪಡೆಯಿತು. ಇನ್ಸ್ಪೆಕ್ಟರ್ ಕವರ್ ಇಕ್ಬಾಲ್ ಸಿಂಗ್ ಪ್ರಕಾರ, ಆರೋಪಿಯನ್ನು ಇನ್ನೂ ವಿಚಾರಣೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ಆರೋಪಿಯಿಂದ ಹೆಚ್ಚಿನ ವಿಚಾರ ಬಹಿರಂಗಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.