ರಾಂಪುರ, ಉತ್ತರಪ್ರದೇಶ: ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ವಿರುದ್ಧದ 2019ರ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಪಿ ಎಂಎಲ್ಎ ನ್ಯಾಯಾಲಯ ಇಂದು (ಜುಲೈ 15) ತೀರ್ಪು ನೀಡಿದೆ. ನ್ಯಾಯಾಲಯ ಅಜಂ ಖಾನ್‌ಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.
ಎಸ್‌ಪಿ ಮುಖಂಡರಾದ ಅಜಂ ಖಾನ್ ಮತ್ತು ಅಬ್ದುಲ್ಲಾ ಅಜಂ ಖಾನ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯ ಅಜಂ ಖಾನ್‌ಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿದೆ. ಶಿಕ್ಷೆ ಜೊತೆಗೆ ಒಂದು ಸಾವಿರ ರೂಪಾಯಿ ದಂಡ ಸಹ ವಿಧಿಸಿ ಆದೇಶಿಸಿದೆ.
ಅಜಂ ಖಾನ್ ಪರ ವಾದವನ್ನು ಅವರ ಪರ ವಕೀಲರು ಬುಧವಾರ ಪೂರ್ಣಗೊಳಿಸಿದ್ದರು. ಜಂಟಿ ನಿರ್ದೇಶಕ (ಪ್ರಾಸಿಕ್ಯೂಷನ್) ಶಿವಪ್ರಕಾಶ್ ಪಾಂಡೆ ಈ ವಿಷಯವನ್ನು ತಿಳಿಸಿದ್ದಾರೆ. ಬುಧವಾರ ವಾದ- ಪ್ರತಿವಾದ ಆಲಿಸಿದ್ದ ಮ್ಯಾಜಿಸ್ಟ್ರೇಟ್ ಶೋಭಿತ್ ಬನ್ಸಾಲ್, ಇಂದಿಗೆ ತೀರ್ಪು ಕಾಯ್ದಿರಿಸಿದ್ದರು.
ಏನಿದು ಪ್ರಕರಣ?: 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಿಲಾಕ್ ವಿಧಾನಸಭಾ ಕ್ಷೇತ್ರದ ಖಟ್ ನಗರಿಯಾ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಜಂ ಖಾನ್ ಆಕ್ಷೇಪಾರ್ಹ ಭಾಷಣ ಮಾಡಿದ್ದರು. ಸಾರ್ವಜನಿಕ ಸಭೆಯಲ್ಲಿ ಅಜಂ ಖಾನ್ ಮಾಡಿದ್ದ ಭಾಷಣದ ವೇಳೆ ರಾಂಪುರದ ಅಂದಿನ ಆಡಳಿತಾಧಿಕಾರಿಗಳನ್ನು ಹೊರತುಪಡಿಸಿ ಪ್ರಧಾನಿ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ವಿರುದ್ಧ ಅವಹೇಳನಕಾರಿಯಾಗಿ ಟೀಕಿಸಿದ್ದರು. ಅಲ್ಲದೇ, ಕೋಮ ಸೌಹಾರ್ದತೆ ಕೆರಳಿಸುವ ಬಗ್ಗೆ ಮಾತನಾಡಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು.
ಓದಿ: ದ್ವೇಷ ಭಾಷಣ.. ಶಾಸಕ ಸ್ಥಾನ ಕಳೆದುಕೊಂಡಿದ್ದ ಪ್ರಕರಣದಲ್ಲಿ ಅಜಂ ಖಾನ್ ಖುಲಾಸೆ
ಅಜಂ ಖಾನ್ ವಿರುದ್ಧ ಪ್ರಕರಣ ದಾಖಲು: ಈ ಸಂಬಂಧ ಬಿಜೆಪಿ ಮುಖಂಡ ಆಕಾಶ್ ಸಕ್ಸೇನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರದಲ್ಲಿ ಈ ವಿಷಯವು ರಾಂಪುರದ ಎಂಪಿ ಎಂಎಲ್ಎ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು 2022ರ ಅಕ್ಟೋಬರ್ 17ರಂದು ಅಜಂ ಖಾನ್ ಅವರನ್ನು ಕೋರ್ಟ್ ದೋಷಿ ಎಂದು ಪ್ರಕಟಿಸಿತ್ತು. ಅಲ್ಲದೇ, ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದಾದ ಬಳಿಕ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಗಿತ್ತು.
ಅಜಂ ಖಾನ್‌ಗೆ ರಿಲೀಫ್ ನೀಡಿದ್ದ ಕೋರ್ಟ್: ಇದರ ಪರಿಣಾಮ ಅಜಂ ಖಾನ್ ತಮ್ಮ ಶಾಸಕತ್ವ ಕಳೆದುಕೊಂಡಿದ್ದರು. ಇದಲ್ಲದೇ ಅವರ ಮತದಾನದ ಹಕ್ಕನ್ನೂ ಕಳೆದುಕೊಳ್ಳಬೇಕಾಗಿ ಬಂದಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಅಜಂ ಖಾನ್ ಅದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಆಲಿಸಿದ ನ್ಯಾಯಾಲಯವು ಪ್ರಕರಣದಿಂದಲೇ ದೋಷಮುಕ್ತಗೊಳಿಸಿತ್ತು. ಆಗ ನ್ಯಾಯಾಲಯದಿಂದ ಅಜಂ ಖಾನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತೆ ಆಗಿತ್ತು.
2017ರಲ್ಲಿ ನಡೆದ ರಾಂಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಜಂ ಖಾನ್ ಗೆದ್ದಿದ್ದರು. ಬಳಿಕ 2019ರಲ್ಲಿ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿ ಜಯ ಸಾಧಿಸಿದ್ದರು. ಇದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸದರಾಗಿ ಮುಂದುವರೆದಿದ್ದರು. ಆದರೆ, 2022ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅದೇ ರಾಂಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಗ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಶಾಸಕರಾಗಿಯೇ ಮುಂದುವರೆದಿದ್ದರು.