ಬಂಡಾ(ಉತ್ತರ ಪ್ರದೇಶ): ನಾಲ್ಕು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಡಾ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಹೋದರ - ಸಹೋದರಿ ಸೇರಿದಂತೆ ಒಟ್ಟು 6 ಮಕ್ಕಳು ನದಿ ಮತ್ತು ಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಜಿಲ್ಲೆಯ ಗಿರ್ವಾನ್ ಪ್ರದೇಶದ ಕೊಲವಲ್ ರಾಯ್ಪುರದಲ್ಲಿ ನದಿಯಲ್ಲಿ ಸ್ನಾನ ಮಾಡಲು ಹೋದ ಸಹೋದರ, ಸಹೋದರಿ ಸೇರಿದಂತೆ ಇನ್ನೊಂದು ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಬಾಬುರಾಮ್ ಯಾದವ್ ಅವರ ಮಗಳು ಸೀತಾ ಮತ್ತು ಮಗ ಉಮೇಶ್ ಹಾಗೂ ರಾಂಪಾಲ್ ಯಾದವ್ ಅವರ ಮಗ ಸೂರಜ್ ಮೃತರು.
ಮಕ್ಕಳನ್ನು ಗ್ರಾಮಸ್ಥರು ಬದುಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೂವರು ಮಕ್ಕಳ ಶವಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇನ್ನು ಕೊತ್ವಾಲಿ ಪ್ರದೇಶದ ಜರಿ ಗ್ರಾಮದಲ್ಲಿ ಇಬ್ಬರು ಸಹೋದರಿಯರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನಿಶಾ ಮತ್ತು ಪೂಜಾ ತಮ್ಮ ಕುಟುಂಬದೊಂದಿಗೆ ಕೊಳದಲ್ಲಿ ಸ್ನಾನ ಮಾಡಲು ಹೋದಾಗ ಈ ಘಟನೆ ಸಂಭವಿಸಿದೆ. ಪೂಜಾಳನ್ನು ಗ್ರಾಮಸ್ಥರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕ್ಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಜಿಲ್ಲೆಯ ಬಿಸಂದಾ ಪೊಲೀಸ್ ಠಾಣಾ ವ್ಯಾಪ್ತಿಯ ಇತ್ರಾ ಹಳ್ಳಿಯಯಲ್ಲಿ ಗಡರ್ ನದಿಯಲ್ಲಿ ಮುಳುಗಿ 8 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಅಮೃತ ಸಾಹು ಮೃತದೇಹವನ್ನು ನದಿಯಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊನೆಯದಾಗಿ, ಬಾಬೇರು ಕೊತ್ವಾಲಿ ಪ್ರದೇಶದ ತೋಲಾ ಕಲಾ ಗ್ರಾಮದಲ್ಲಿ ಹರಿಯುತ್ತಿರುವ ಮತಿಯಾರಿ ನದಿಯಲ್ಲಿ ಮುಳುಗಿ ಗ್ರಾಮದ ರಾಧಾ (6) ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಕಾಲು ಜಾರಿ ನದಿಗೆ ಬಿದ್ದಿದ್ದಾಳೆ ಎನ್ನಲಾಗಿದೆ.