ನವದೆಹಲಿ: ಭಾರತದಲ್ಲಿ ಕೋವಿಡ್ -19 ಲಸಿಕೆಯಾಗಿರುವ 'ಸ್ಪುಟ್ನಿಕ್ ವಿ' ತಯಾರಿಸಲು ಅನುಮತಿ ಕೋರಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಡ್ರಗ್ ಕಂಟ್ರೋಲರ್ ಜನರಲ್ ಆಪ್ ಇಂಡಿಯಾ (ಡಿಸಿಜಿಐ) ಗೆ ಅರ್ಜಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ಪುಣೆ ಮೂಲದ ಸಂಸ್ಥೆಯಾಗಿರುವ ಸೀರಮ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಕೋವಿಡ್ ಲಸಿಕೆಯನ್ನು ಈಗಾಗಲೇ ದೇಶಾದ್ಯಂತ ನೀಡಲಾಗುತ್ತಿದೆ. ಇದಲ್ಲದೇ ಅಮೆರಿಕ ಮೂಲದ ನೊವಾವಾಕ್ಸ್ ಕಂಪನಿ ಜೊತೆ ಸೇರಿ 'ಕೊವೊವಾಕ್ಸ್' ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನೂ ಭಾರತದಲ್ಲಿ ನಡೆಸಲಾಗುತ್ತಿದ್ದು, ಸೆಪ್ಟೆಂಬರ್ ಒಳಗೆ ರೂಪಾಂತರ ವೈರಸ್ ಮಣಿಸುವ ಮತ್ತೊಂದು ದೇಶಿ ಲಸಿಕೆ ಲಭ್ಯವೆಂದು ಸಿಇಒ ಅದಾರ್ ಪೂನವಾಲ್ಲಾ ಹೇಳಿದ್ದರು.
ಇದನ್ನೂ ಓದಿ: ಮಕ್ಕಳ ಮೇಲೆ ಕೋವಾಕ್ಸಿನ್ ಲಸಿಕೆ ಪ್ರಯೋಗ ಆರಂಭಿಸಿದ ಪಾಟ್ನಾ ಏಮ್ಸ್
ಇದೀಗ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲೂ ಅನುಮತಿ ನೀಡಿ, ಅದರ ವಿಶ್ಲೇಷಣೆ ಮತ್ತು ಪರೀಕ್ಷೆಗೆ ಅವಕಾಶ ಮಾಡಿಕೊಡಿ ಎಂದು ಕೇಳಿದೆ. ಡಿಸಿಜಿಐ ಅನುಮೋದನೆ ಮೇರೆಗೆ ಈಗಾಗಲೇ ಸ್ಪುಟ್ನಿಕ್ ವಿ ಲಸಿಕೆಯನ್ನು ಪ್ರಸ್ತುತ ಭಾರತದಲ್ಲಿ ಹೈದರಾಬಾದ್ನ ಡಾ. ರೆಡ್ಡಿ ಲ್ಯಾಬೋರೇಟರಿ ತಯಾರಿಸುತ್ತಿದ್ದು, ಮಂಗಳವಾರವಷ್ಟೇ ಸ್ಪುಟ್ನಿಕ್ ವಿ ಲಸಿಕೆಯ 30 ಲಕ್ಷ ಡೋಸ್ ಹೈದರಾಬಾದ್‌ಗೆ ಬಂದಿದೆ.