ಭೋಪಾಲ್ (ಮಧ್ಯಪ್ರದೇಶ): ದ್ವಾರಕಾ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಪರಮಹಂಸಿ ಗಂಗಾ ಆಶ್ರಮದಲ್ಲಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಕೊನೆಯುಸಿರೆಳೆದರು.
ಸ್ವಾಮಿ ಸ್ವರೂಪಾನಂದ ಸರಸ್ವತಿಯವರು 1924ರ ಸೆಪ್ಟೆಂಬರ್ 2ರಂದು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಜಬಲ್‌ಪುರ ಸಮೀಪದ ದಿಘೋರಿ ಗ್ರಾಮದಲ್ಲಿ ಜನಿಸಿದ್ದರು. ತಂದೆ ಧನಪತಿ ಉಪಾಧ್ಯಾಯ ಮತ್ತು ತಾಯಿ ಗಿರಿಜಾ ದೇವಿ ಅವರ ಪುತ್ರರಾಗಿದ್ದು, ಪೋತಿರಾಮ್ ಉಪಾಧ್ಯಾಯ ಎಂದು ನಾಮಕರಣ ಮಾಡಿದ್ದರು. ನಂತರ ತಮ್ಮ ಒಂಬತ್ತನೆಯ ವಯಸ್ಸಿನಲ್ಲಿ ಅವರು ಮನೆ ತೊರೆದು ಧಾರ್ಮಿಕ ತೀರ್ಥಯಾತ್ರೆಗಳನ್ನು ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಕಾಶಿಯನ್ನು ತಲುಪಿ ಇಲ್ಲಿ ವೇದ, ಧರ್ಮ ಗ್ರಂಥಗಳನ್ನು ಕಲಿತರು.
ಅಲ್ಲದೇ, ಆಗ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿ ನಡೆಯುತ್ತಿತ್ತು. ಇದರಿಂದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ 19ನೇ ವಯಸ್ಸಿನಲ್ಲಿ ಕ್ರಾಂತಿಕಾರಿ ಸಾಧು ಎಂದೇ ಖ್ಯಾತಿ ಗಳಿಸಿದ್ದರು. ಈ ಸಮಯದಲ್ಲಿ ಅವರು ವಾರಣಾಸಿ ಜೈಲಿನಲ್ಲಿ ಒಂಬತ್ತು ತಿಂಗಳು ಮತ್ತು ಮಧ್ಯಪ್ರದೇಶ ಜೈಲಿನಲ್ಲಿ ಆರು ತಿಂಗಳು ಕಳೆದಿದ್ದರು.