ವಿಲ್ಲುಪುರಂ (ತಮಿಳುನಾಡು) : ವಿಲ್ಲುಪುರಂ ಜಿಲ್ಲೆಯ ಆಶ್ರಮವೊಂದರಲ್ಲಿ ತಂಗಿರುವ ವಿಕಲಚೇತನರು ಹಾಗೂ ಮಾನಸಿಕ ಅಸ್ವಸ್ಥರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆರೋಪಗಳ ಹಿನ್ನೆಲೆಯಲ್ಲಿ ಜವಾಹರುಲ್ಲಾ ಎಂಬುವರನ್ನು ಭೇಟಿಯಾಗಲು ತಿರುಪುರದಿಂದ ತೆರಳಿದ್ದ ಅವರ ಸಂಬಂಧಿಕರು ಆಶ್ರಮದಲ್ಲಿದ್ದ ಜವಾಹರುಲ್ಲಾ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಜವಾಹರುಲ್ಲಾ ಅವರ ಸಂಬಂಧಿಕರು ಮದ್ರಾಸ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅದನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದು, ಅನುಮತಿ ಇಲ್ಲದೆ ಅಕ್ರಮವಾಗಿ ಆಶ್ರಮ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಆಶ್ರಮದಲ್ಲಿ ತಂಗಿರುವ ಮಾನಸಿಕ ಅಸ್ವಸ್ಥರು ಹಾಗೂ ವಿಕಲಚೇತನರಿಗೆ ಮಂಗಗಳಿಂದ ಹಿಂಸೆ ನೀಡುತ್ತಿರುವುದು ಕೂಡ ಬಯಲಾಗಿದೆ. ಅದೇ ರೀತಿ ಆಶ್ರಮದಲ್ಲಿ ತಂಗಿದ್ದ 15ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಎಲ್ಲ ಮಾಹಿತಿಗಳು ಬೆಳಕಿಗೆ ಬಂದ ನಂತರ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸರು ಆಶ್ರಮದಲ್ಲಿದ್ದ ಎಲ್ಲರನ್ನೂ ರಕ್ಷಿಸಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಅಲ್ಲದೆ, ಆಶ್ರಮದಲ್ಲಿ ಉಳಿದುಕೊಂಡಿದ್ದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪಗಳು ಕೋಲಾಹಲ ಸೃಷ್ಟಿಸಿವೆ. ಅನುಮತಿ ಇಲ್ಲದೆ ನಡೆಸುತ್ತಿದ್ದ ಆಶ್ರಮವನ್ನು ಸೀಲ್ ಮಾಡುವಂತೆ ಏತನ್ಮಧ್ಯೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಪ್ರಕರಣದ ಬಗ್ಗೆ ಗಂಭೀರವಾಗಿ ತನಿಖೆ ನಡೆಸುವಂತೆ ತಮಿಳುನಾಡು ಡಿಜಿಪಿ ಶೈಲೇಂದ್ರಬಾಬು ಅವರು ಸಿಬಿಸಿಐಡಿಗೆ ಸೂಚಿಸಿದ್ದಾರೆ.
ಈ ಮಧ್ಯೆ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯ ಸಂಯೋಜಕಿ ಕಾಂಜನ್ ಖಟ್ಟರ್ ನೇತೃತ್ವದ ನಾಲ್ವರು ಸದಸ್ಯರ ತಂಡವು ಮಹಿಳೆಯರ ಮೇಲಿನ ಅತ್ಯಾಚಾರದ ತನಿಖೆಗಾಗಿ ವೈದ್ಯರೊಂದಿಗೆ ವಿಲ್ಲುಪುರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 16 ಮಹಿಳೆಯರನ್ನು ಭೇಟಿ ಮಾಡಿದೆ. ಮಾನಸಿಕ ಅಸ್ವಸ್ಥ ವ್ಯಕ್ತಿಗಳು ಮತ್ತು ಮಹಿಳೆಯರಿಗೆ ಲೈಂಗಿಕ ಕಿರುಕುಳ ಮತ್ತು ಮಂಗಗಳಿಂದ ಬೆದರಿಕೆ ಹಾಕಲಾಗಿದೆ ಎಂದು ಇವರ ತನಿಖೆಯಿಂದ ತಿಳಿದುಬಂದಿದೆ. ಆಶ್ರಮದಲ್ಲಿ ತಂಗಿದ್ದ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸಂಯೋಜಕಿ ಕಾಂಜನ್ ಖಟ್ಟರ್ ಖಚಿತಪಡಿಸಿದ್ದಾರೆ. ಅಲ್ಲದೆ ತನಿಖಾ ವರದಿಯನ್ನು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ ವಿಚಾರಣೆಯು ನಿನ್ನೆ (ಫೆಬ್ರವರಿ 18) ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಪಳನಿ ಅವರ ಸಮ್ಮುಖದಲ್ಲಿ ನಡೆಯಿತು. ಈ ವೇಳೆ ಮಕ್ಕಳ ರಕ್ಷಣಾ ವಿಭಾಗದ ನಿರ್ದೇಶಕ ಅಮರ್ ಕುಶ್ವಾಹ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ, ವಿಲ್ಲುಪುರಂ ಆರ್‌ಟಿಒ (ಜನರಲ್) ತವಿಶ್ವನಾಥನ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ತಂಗವೇಲು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭಾರ್ಗವಿ, ವಕೀಲೆ ಮೀನಾ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.
ಮದುವೆಯಾಗುವುದಾಗಿ ನಂಬಿಸಿ ವಂಚನೆ- ದೂರು: ಮದುವೆಯಾಗುವುದಾಗಿ ಭರವಸೆ ನೀಡಿದ ವ್ಯಕ್ತಿಯೊಬ್ಬ ತನ್ನನ್ನು ವಂಚಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ತೆಲಂಗಾಣದ ಬೋರಬಂಡಾ ಮೂಲದ 29 ವರ್ಷದ ಮಹಿಳೆಯೊಬ್ಬರು ಅಮೀರ್‌ಪೇಟ್‌ನ ಎಸ್‌ಆರ್‌ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೃತ್ತಿಯಲ್ಲಿ ಜೂನಿಯರ್ ಆರ್ಟಿಸ್ಟ್ ಮತ್ತು ಯೂಟ್ಯೂಬರ್ ಆಗಿರುವ ಮಹಿಳೆ ಈಗ ಐದು ತಿಂಗಳ ಗರ್ಭಿಣಿಯಾಗಿದ್ದು, ಮದುವೆಯ ನೆಪದಲ್ಲಿ ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮಳವಳ್ಳಿ ಬಾಲಕಿ ರೇಪ್ ಅಂಡ್ ಮರ್ಡರ್ ಪ್ರಕರಣ: 638 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ