ಲೂಧಿಯಾನ (ಪಂಜಾಬ್): ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿನ ಉಲ್ಲಂಘನೆಯ ಚರ್ಚೆಯ ನಡುವೆಯೇ ಈ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪಂಜಾಬ್‌ನಲ್ಲಿ ಭದ್ರತಾ ಲೋಪವಾಗಿದೆ.
ಪಂಜಾಬ್‌ನಲ್ಲಿ ರಾಹುಲ್ ಗಾಂಧಿಯವರಿಗೆ ಉಂಟಾದ ಭದ್ರತೆಯ ಲೋಪದಿಂದ ಭದ್ರತಾ ಸಂಸ್ಥೆಗಳು ಸಂಕಷ್ಟಕ್ಕೆ ಈಡಾಗಿವೆ. ಮುಂದಿನ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲು ರಾಹುಲ್ ಲೂಧಿಯಾನಕ್ಕೆ ತೆರಳಿದ್ದರು. ಹಲ್ವಾರದಿಂದ ಲೂಧಿಯಾನದ ಹಯಾತ್ ರೀಜೆನ್ಸಿಗೆ ತೆರಳುವ ವೇಳೆ ಕಾರು ಹರ್ಷಿಲಾ ರೆಸಾರ್ಟ್ ಬಳಿ ಬಂದಿದೆ.
ಆಗ ರಾಹುಲ್ ಗಾಂಧಿ ಅವರು ಕಾರಿನ ಕಿಟಿಕಿಯ ಬಾಗಿಲು ತೆರೆದು ಶುಭಾಶಯಗಳನ್ನು ಸ್ವೀಕರಿಸುತ್ತಿದ್ದರು. ಆ ನಡುವೆ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಕಾರಿನತ್ತ ಯುವಕನೊಬ್ಬ ಬಾವುಟ ಎಸೆದಿದ್ದಾನೆ.
ಇದಾದ ಬಳಿಕ ರಾಹುಲ್ ಗಾಂಧಿ ಕಾರಿನ ಗಾಜುಗಳನ್ನು ಮುಚ್ಚಿದ್ದಾರೆ. ಘಟನೆಯ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಸುನೀಲ್ ಜಾಖಡ್ ಕಾರು ಚಾಲನೆ ಮಾಡುತ್ತಿದ್ದರು, ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಚನ್ನಿ ಮತ್ತು ಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಹಿಂದೆ ಕುಳಿತಿದ್ದರು.
ಇದನ್ನೂ ಓದಿ: ಪಾಕಿಸ್ತಾನದ ನೌಕಾಪಡೆಯಿಂದ ಎರಡು ಭಾರತೀಯ ದೋಣಿ, 12 ಮೀನುಗಾರರ ವಶ
ಘಟನೆಯ ನಂತರ ಭದ್ರತೆಯಲ್ಲಿ ನಿಯೋಜನೆಗೊಂಡಿದ್ದ ಎಲ್ಲ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಧ್ವಜ ಎಸೆದ ಯುವಕ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘದ (ಎನ್‌ಎಸ್‌ಯುಐ) ಕಾರ್ಯಕರ್ತನಾಗಿದ್ದು, ಸಿಟ್ಟಿನಿಂದ ರಾಹುಲ್ ಗಾಂಧಿ ಕಡೆಗೆ ಧ್ವಜ ಎಸೆದಿದ್ದಾನೆ ಎನ್ನಲಾಗಿದೆ. ಈತ ಜಮ್ಮು ಕಾಶ್ಮೀರದ ನಿವಾಸಿ ಎಂದು ಹೇಳಲಾಗಿದೆ.
ಜನವರಿ 5 ರಂದು ಪಂಜಾಬ್‌ನ ಫಿರೋಜ್‌ಪುರದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಬರುವಾಗ ನರೇಂದ್ರ ಮೋದಿಗೆ ಆದ ಭದ್ರತಾ ಲೋಪವನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಅವರು ಬಟಿಂಡಾ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಹೊರಟರು. ಆದರೆ, ಫಿರೋಜ್‌ಪುರದ ಪ್ಯಾರಿಯಾನಾ ಗ್ರಾಮದ ಬಳಿ ರಸ್ತೆ ತಡೆಯಿಂದಾಗಿ ಅವರು ಫ್ಲೈಓವರ್‌ನಲ್ಲಿ 20 ನಿಮಿಷ ಸಿಲುಕಿಕೊಂಡಿದ್ದರು.