ನವದೆಹಲಿ: ಉತ್ತರ ಪ್ರದೇಶದ ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ವೈಜ್ಞಾನಿಕ ಸಮೀಕ್ಷೆಯ ಸಮಯದಲ್ಲಿ ಯಾವುದೇ ಹಾನಿಗೆ ಆಸ್ಪದ ನೀಡದಂತೆ ಎಎಸ್‌ಐಗೆ ಸೂಚಿಸಿತು. ಎಎಸ್‌ಐ ಮತ್ತು ಉತ್ತರ ಪ್ರದೇಶ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಸೀದಿಯ ಸಮೀಕ್ಷೆಯ ಸಮಯದಲ್ಲಿ ಯಾವುದೇ ಉತ್ಖನನ ನಡೆಸುವುದಿಲ್ಲ. ಯಾವುದೇ ರಚನೆಗೆ ಯಾವುದೇ ಹಾನಿ ಉಂಟುಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸರ್ವೇಗೆ ಅಲಹಾಬಾದ್ ಹೈಕೋರ್ಟ್ ಅಸ್ತು.. ಮಸೀದಿ ಸಮಿತಿ ಅರ್ಜಿ ವಜಾ
ಗುರುವಾರವಷ್ಟೇ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಮಸೀದಿ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇಂದು ವೈಜ್ಞಾನಿಕ ಸಮೀಕ್ಷೆಗೆ ತಡೆ ನೀಡಲು ಕೋರ್ಟ್ ನಿರಾಕರಿಸಿದ್ದರಿಂದ ಹಿಂದೂ ಸಂಘಟನೆಗಳ ಪಾಲಿಗೆ ಮನ್ನಣೆ ಸಿಕ್ಕಂತಾಗಿದೆ.
ಹೆಚ್ಚುವರಿ ನಾಲ್ಕು ವಾರಗಳ ಕಾಲಾವಕಾಶ: ಮತ್ತೊಂದೆಡೆ, ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲು ವಾರಣಾಸಿ ನ್ಯಾಯಾಲಯವು ಇಂದು ಎಎಸ್‌ಐಗೆ ಹೆಚ್ಚುವರಿ ನಾಲ್ಕು ವಾರಗಳ ಕಾಲಾವಕಾಶ ನೀಡಿ ಆದೇಶಿಸಿದೆ. ಎಎಸ್‌ಐ ಪರ ಮನವಿ ಆಲಿಸಿದ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು ಸಮೀಕ್ಷೆಗೆ ಹೆಚ್ಚುವರಿ ಕಾಲಾವಕಾಶ ನೀಡಲು ಸಮ್ಮತಿಸಿದರು. ಇದೇ ವೇಳೆ, ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲ ಮದನ್ ಮೋಹನ್ ಯಾದವ್, ಸಮೀಕ್ಷೆಯನ್ನು ಪೂರ್ಣಗೊಳಿಸಲು ಆಗಸ್ಟ್ 4 ರಿಂದ ಸೆಪ್ಟೆಂಬರ್ 4 ರವರೆಗೆ ಗಡುವನ್ನು ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಕರಣವೇನು? : 17ನೇ ಶತಮಾನದ ಜ್ಞಾನವಾಪಿ ಮಸೀದಿಯನ್ನು ಈ ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ ಮೇಲೆಯೇ ನಿರ್ಮಿಸಲಾಗಿದೆ ಎಂದು ಪತ್ತೆ ಹಚ್ಚಲು ಹಿಂದೂ ಪರ ಸಂಘಟನೆಗಳು ಭಾರತೀಯ ಪುರಾತತ್ವ ಇಲಾಖೆಯ ವೈಜ್ಞಾನಿಕ ಸಮೀಕ್ಷೆಗಾಗಿ ಕಾನೂನು ಹೋರಾಟ ನಡೆಸುತ್ತಿವೆ. ಮತ್ತೊಂದೆಡೆ, ವೈಜ್ಞಾನಿಕ ಸಮೀಕ್ಷೆಗೆ ತಡೆ ಕೋರಿ ಮಸೀದಿ ಆಡಳಿತ ಮಂಡಳಿ ಸಹ ಕಾನೂನು ಹೋರಾಟ ಮಾಡುತ್ತಿದೆ.
ಜುಲೈ 21ರಂದು ವಾರಣಾಸಿ ನ್ಯಾಯಾಲಯವು ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿತ್ತು. ಈ ಆದೇಶದ ಮೇರೆಗೆ ಜುಲೈ 24ರಂದು ನಾಲ್ಕು ಗಂಟೆಗಳ ಕಾಲ ಎಎಸ್‌ಐ ಅಧಿಕಾರಿಗಳು ಸಮೀಕ್ಷೆಯನ್ನು ನಡೆಸುತ್ತಿದ್ದರು. ಇದರ ನಡುವೆ ಅಂದರೆ ಅದೇ ದಿನ ಈ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಮತ್ತೊಂದೆಡೆ, ಅಲಹಾಬಾದ್ ಹೈಕೋರ್ಟ್ ಸಮೀಕ್ಷೆಗೆ ತಡೆ ನೀಡಿದ್ದನ್ನು ಆಗಸ್ಟ್ 3ರವರೆಗೆ ವಿಸ್ತರಿಸಿತ್ತು. ಅಂತಿಮವಾಗಿ ಗುರುವಾರ (ಆಗಸ್ಟ್ 3) ಹೈಕೋರ್ಟ್ ಸಮೀಕ್ಷೆಗೆ ಅನುಮತಿ ನೀಡಿತ್ತು. ಈ ಆದೇಶದ ವಿರುದ್ಧ ಮಸೀದಿ ಮಂಡಳಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ, ಸಮೀಕ್ಷೆಗೆ ತಡೆ ಕೋರಿತ್ತು.
ಇದನ್ನೂ ಓದಿ: 'ಸ್ವಾಭಿಮಾನದ ವಿರುದ್ಧ ಕೆಲಸ ಮಾಡಲು ಸಾಧ್ಯವಿಲ್ಲ': ಕಲಾಪದ ವೇಳೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನ್ಯಾಯಮೂರ್ತಿ