ನವದೆಹಲಿ: ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಸುಮಾರು ಶೇ 45 ಸಿಬ್ಬಂದಿ ಮತ್ತು ಇತರ ಸಿಬ್ಬಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, ನ್ಯಾಯಾಲಯವು ಹೆಚ್ಚುವರಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ರೋಗ ಲಕ್ಷಣಗಳೊಂದಿಗೆ ಕೋರ್ಟ್ ಆವರಣಕ್ಕೆ ಪ್ರವೇಶಿಸುವ ಪ್ರತಿಯೊಬ್ಬರಿಗೂ ಸುಪ್ರೀಂಕೋರ್ಟ್ ಕೋವಿಡ್ -19 ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.
ನ್ಯಾಯಾಲಯವು ಹೊರಡಿಸಿದ ಹೊಸ ಮಾರ್ಗಸೂಚಿ ಪ್ರಕಾರ "ಸುಪ್ರೀಂಕೋರ್ಟ್ ಆವರಣಕ್ಕೆ ಪ್ರವೇಶಿಸುವವರೆಲ್ಲರೂ, ಅಂದರೆ ನೋಂದಣಿ ಸಿಬ್ಬಂದಿ, ಸಂಯೋಜನಾ ಸಂಸ್ಥೆಗಳ ಸಿಬ್ಬಂದಿ, ವಕೀಲರು ಮತ್ತು ಅವರ ಸಿಬ್ಬಂದಿ ಇತ್ಯಾದಿ ಎಲ್ಲರೂ ಕೊರೊನಾ ಸೋಂಕಿನ ಲಕ್ಷಣಗಳನ್ನು ಹೊಂದಿದ್ದರೆ ರ್ಯಾಪಿಡ್/ಆರ್ಟಿಪಿಸಿಆರ್ ಪರೀಕ್ಷೆ ನಡೆಸುವುದು ಕಡ್ಡಾಯ" ಎಂದು ತಿಳಿಸಿದೆ.
ಎಲ್ಲ ನಿಯಂತ್ರಣ ಅಧಿಕಾರಿಗಳು ತಮ್ಮ ಸಿಬ್ಬಂದಿ ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ಆಗಾಗ ಸ್ಯಾನಿಟೈಸ್ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಜ್ವರ, ಕೆಮ್ಮು, ಮೈ-ಕೈ ನೋವು, ರುಚಿ ಮತ್ತು ವಾಸನೆಯ ನಷ್ಟ, ಅತಿಸಾರ ಇತ್ಯಾದಿಗಳು ಕೊರೊನಾ ಲಕ್ಷಣಗಳಾಗಿದ್ದು, ಈ ಲಕ್ಷಣ ಕಂಡು ಬಂದವರು ತಕ್ಷಣ ಕ್ವಾರಂಟೈನ್ಗೆ ಒಳಗಾಗಿ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಸೂಚಿಸಲಾಗಿದೆ.
ಒಂದು ಸಮಯದಲ್ಲಿ ಮೂರಕ್ಕಿಂತ ಹೆಚ್ಚು ವ್ಯಕ್ತಿಗಳು ಲಿಫ್ಟ್ ಬಳಸಬಾರದು. ಮೇಲಕ್ಕೆ ಹೋಗಲು ಮಾತ್ರ ಲಿಫ್ಟ್ ಬಳಸಬೇಕು, ಕೆಳಗಿಳಿಯಲು ಮೆಟ್ಟಿಲುಗಳನ್ನು ಬಳಸಬೇಕು ಎಂದು ಎಂದು ಸುತ್ತೋಲೆಯಲ್ಲಿ ಸೇರಿಸಲಾಗಿದೆ.
ಉನ್ನತ ನ್ಯಾಯಾಲಯವು ವರ್ಚುಯಲ್ ಮೋಡ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಮೂಲಗಳ ಪ್ರಕಾರ, ನ್ಯಾಯಾಲಯದ 40ಕ್ಕೂ ಹೆಚ್ಚು ಸಿಬ್ಬಂದಿ ಕೋವಿಡ್ -19 ಕಾಯಿಲೆಗೆ ತುತ್ತಾಗಿದ್ದು, ನ್ಯಾಯಾಲಯವು 3,400ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.