ತಮಿಳುನಾಡು/ನವದೆಹಲಿ: ಸನಾತನ ಧರ್ಮ ಡೆಂಘಿ, ಮಲೇರಿಯಾ ಇದ್ದ ಹಾಗೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿ ವಿವಾದ ಸೃಷ್ಟಿಸಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಬಳಿಕ, ಅವರದ್ದೇ ಪಕ್ಷದ ನಾಯಕ ಎ ರಾಜಾ ಕೂಡ ಇಂಥದ್ದೇ ಹೇಳಿಕೆ ನೀಡಿದ್ದಾರೆ. ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಲೋಕಸಭಾ ಸಂಸದರಾಗಿರುವ ಎ.ರಾಜಾ, 'ಸನಾತನ ಧರ್ಮ ಕುಷ್ಠರೋಗ, ಏಡ್ಸ್ ಕಾಯಿಲೆ ಇದ್ದ ಹಾಗೆ. ಇವು ನಮಗೆ ಒಂದು ಕಾಲದಲ್ಲಿ ಸಂಕಷ್ಟ ಉಂಟು ಮಾಡಿದ್ದವು. ಅದರಂತೆಯೇ ಸನಾತನ ಧರ್ಮ ಕೂಡ' ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
'ಉದಯನಿಧಿ ಸ್ಟಾಲಿನ್ ಸೌಮ್ಯ ಮತ್ತು ಮೃದುವಾಗಿ ಟೀಕಿಸಿದ್ದರು. ನಾನು ಕಠಿಣವಾಗಿ ಟೀಕಿಸುವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸನಾತನ ಧರ್ಮವನ್ನು ಅನುಸರಿಸುತ್ತಾರೆ. ಅವರು ನಿಜವಾದ ಸನಾತನಿ ಆಗಿದ್ದರೆ, ವಿದೇಶಗಳಿಗೆ ಭೇಟಿ ನೀಡುತ್ತಿರಲಿಲ್ಲ. ನಿಜವಾದ ಹಿಂದೂ ಸಮುದ್ರವನ್ನು ದಾಟಿ ವಿದೇಶಕ್ಕೆ ಹೋಗಬಾರದು. ಆದರೆ, ಅವರು ಅದರ ವಿರುದ್ಧವಾಗಿದ್ದಾರೆ' ಎಂದು ರಾಜಾ ಹೇಳಿದ್ದಾರೆ.
ನಾನು ಎಲ್ಲಿ ಬೇಕಾದರೂ ಇದರ ಚರ್ಚೆಗೆ ಸಿದ್ಧನಿದ್ದೇನೆ. ದೆಹಲಿಯಲ್ಲಿ ವರ್ಣಾಶ್ರಮ ಮತ್ತು ಸನಾತನ ಧರ್ಮದ ಬಗ್ಗೆ ಚರ್ಚೆ ನಡೆಸುವಂತೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಡಿಎಂಕೆ ನಾಯಕ ಸವಾಲು ಹಾಕಿದ್ದು, ಚರ್ಚೆಯ ದಿನಾಂಕ ನಿಗದಿಪಡಿಸುವಂತೆ ಹೇಳಿದ್ದಾರೆ.
ಡಿಎಂಕೆ ನಾಯಕರ ಹೇಳಿಕೆ ಒಪ್ಪದ ಕಾಂಗ್ರೆಸ್ ; ಸನಾತನ ಧರ್ಮದ ಕುರಿತು ಡಿಎಂಕೆ ನಾಯಕರಾದ ಉದಯನಿಧಿ ಸ್ಟಾಲಿನ್ ಮತ್ತು ಎ ರಾಜಾ ಅವರ ಟೀಕೆಗಳನ್ನು ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ. ಪಕ್ಷವು ಎಲ್ಲ ಧರ್ಮಗಳಿಗೆ ಸಮಾನ ಗೌರವದ ನಂಬಿಕೆ ಹೊಂದಿದೆ. ಇಂಡಿಯಾ ಮೈತ್ರಿಕೂಟದ ಎಲ್ಲ ಪಕ್ಷಗಳು ಇದನ್ನೇ ಪ್ರತಿಪಾದಿಸುತ್ತವೆ ಎಂದು ಹೇಳಿಕೆ ನೀಡಿದೆ.
ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಯಾವಾಗಲೂ 'ಸರ್ವಧರ್ಮ ಸಮನ್ವಯ'ವನ್ನು ನಂಬುತ್ತದೆ. ಪ್ರತಿಯೊಂದು ಧರ್ಮ, ಪ್ರತಿಯೊಂದು ನಂಬಿಕೆಗೂ ತನ್ನದೇ ಆದ ಜಾಗವಿದೆ. ನಿರ್ದಿಷ್ಟ ನಂಬಿಕೆಯನ್ನು ಯಾರೂ ಹೀಯಾಳಿಸಬಾರದು. ಸಂವಿಧಾನದಲ್ಲೂ ಇದಕ್ಕೆ ಜಾಗವಿಲ್ಲ. ಕಾಂಗ್ರೆಸ್ ಪಕ್ಷ ಇಂತಹ ಯಾವುದೇ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಎಫ್‌ಐಆರ್ ದಾಖಲಿಸಲು ಅರ್ಜಿ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಎ ರಾಜಾ ಅವರು ಸನಾತನ ಧರ್ಮದ ಹೇಳಿಕೆಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಜೊತೆಗೆ ದ್ವೇಷ ಭಾಷಣ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವಿದ್ದರೂ ಪಾಲಿಸದ ದೆಹಲಿ ಪೊಲೀಸರು ಮತ್ತು ಚೆನ್ನೈ ಪೊಲೀಸರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಧಾರ್ಮಿಕ ಭಾವನೆ ಕೆರಳಿಸುವ, ಹಿಂದೂ ಧರ್ಮದ ಅನುಯಾಯಿಗಳಿಗೆ ಅವಮಾನ ಮತ್ತು ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉಂಟು ಮಾಡುವ ಹೇಳಿಕೆ ನೀಡಿದ ಆರೋಪದ ಮೇಲೆ ಸ್ಟಾಲಿನ್, ರಾಜಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ವಕೀಲ ವಿನೀತ್ ಜಿಂದಾಲ್ ಎಂಬುವರು ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ನಾನು ಮಾತನಾಡಿಲ್ಲ: ಸಚಿವ ಡಾ.ಜಿ.ಪರಮೇಶ್ವರ್