ಮಾಲ್ಡಾ (ಪಶ್ಚಿಮ ಬಂಗಾಳ): ಆಟದ ಮೈದಾನದಲ್ಲಿ ಇವರಿಬ್ಬರ ಮಧ್ಯೆ ಸ್ನೇಹ ಬೆಳೆದಿದೆ. ದಿನಗಳು ಕಳೆದಂತೆ ಅವರಿಬ್ಬರ ಸಂಬಂಧವೂ ಗಾಢವಾಗಿದೆ. ಆದರೆ ಇಬ್ಬರೂ ಹುಡುಗಿಯರೇ ಆಗಿದ್ದರಿಂದ ಸದ್ಯ ಸಮಸ್ಯೆ ಶುರುವಾಗಿದೆ. ಅವರಿಬ್ಬರ ಮಧ್ಯೆ ಸಲಿಂಗಕಾಮ ಸಂಬಂಧವು ಆಳವಾಗಿ ಬೆಳೆದಿದೆ. ಈ ಮಧ್ಯೆಯೇ, ಒಬ್ಬಳು ಯುವತಿ ಕುಟುಂಬವು ಅವಳನ್ನು ತರಾತುರಿಯಲ್ಲಿ ಮದುವೆ ಮಾಡಿಕೊಟ್ಟಿದೆ. ಯುವತಿ ತನ್ನ ಪತಿಯೊಂದಿಗೆ ಒಂದು ದಿನವೂ ಕಳೆಯಲಿಲ್ಲ. ಯುವತಿ ತನ್ನ ಗಂಡನ ಮನೆಯನ್ನು ಬಿಟ್ಟು ಓಡಿ ಹೋಗಿದ್ದಾಳೆ. ಅವಳು ನೇರವಾಗಿ ಮಾಲ್ಡಾಕ್ಕೆ ಬಂದು ತನ್ನ ಸಂಗಾತಿಯೊಂದಿಗೆ ಸೇರಿದ್ದಾರೆ.
ಐಷಾರಾಮಿ ಹೋಟೆಲ್‌ನಲ್ಲಿ ವಾಸ: ಅವರಿಬ್ಬರು ಬುಧವಾರ ಬೆಳಗ್ಗೆ ಹಳೆ ಮಾಲ್ಡಾದ ಐಷಾರಾಮಿ ಹೋಟೆಲ್‌ನಲ್ಲಿ ಕೊಠಡಿ ಬಾಡಿಗೆಗೆ ಪಡೆದಿದ್ದರು. ಆದರೆ, ಅದೇ ರಾತ್ರಿ ಈ ಇಬ್ಬರು ಯುವತಿಯರ ವರ್ತನೆಯನ್ನು ಗಮನಿಸಿದ ಹೋಟೆಲ್ ಸಿಬ್ಬಂದಿಗೆ ಅನುಮಾನ ಬಂದಿತ್ತು. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದರು. ಇವರಿಬ್ಬರ ಸಂಬಂಧ ಗೊತ್ತಾದ ನಂತರ ಹೋಟೆಲ್ ಅಧಿಕಾರಿಗಳು ತಡಮಾಡದೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಇಬ್ಬರು ಯುವತಿಯರು: ಮಾಲ್ಡಾ ಪೊಲೀಸರು ಇಬ್ಬರು ಯುವತಿಯರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಅವರು, ಸಂಪೂರ್ಣ ಕಥೆಯನ್ನ ಬಿಚ್ಚಿಟ್ಟಿದ್ದಾರೆ. ಪೊಲೀಸರು ಇಬ್ಬರು ಯುವತಿಯರ ಕುಟುಂಬಗಳನ್ನು ಸಂಪರ್ಕಿಸಿದ್ದಾರೆ. ಇಬ್ಬರು ಯುವತಿಯರಲ್ಲಿ ಒಬ್ಬರು ಅಲಿಪುರ್ದೂರ್ ಜಿಲ್ಲೆಯ ಫಲಕಟಾ ಪೊಲೀಸ್ ಠಾಣೆಯ ನಿವಾಸಿಯಾಗಿದ್ದು, ಮತ್ತೊಬ್ಬರು ಕೂಚ್ ಬೆಹಾರ್ ಜಿಲ್ಲೆಯ ತುಫಂಗಂಜ್‌ನಲ್ಲಿ ವಾಸಿಸುತ್ತಿದ್ದಾರೆ. ಇಬ್ಬರೂ ತಮ್ಮ ಸ್ಥಳೀಯ ಕಾಲೇಜಿನಲ್ಲಿ ಪದವಿಯ ಎರಡನೇ ವರ್ಷದ ವಿದ್ಯಾರ್ಥಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಫುಟ್‌ಬಾಲ್ ಆಡುತ್ತಿದ್ದರು. ಎರಡು ವರ್ಷಗಳ ಹಿಂದೆ, ಅವರು ಆಟದ ಮೈದಾನದಲ್ಲಿ ಪರಸ್ಪರ ಸಂಪರ್ಕಕ್ಕೆ ಬಂದಿದ್ದರು.
ಸಲಿಂಗಕಾಮ ದೇಶದಲ್ಲಿ ಕಾನೂನು ಬದ್ಧ ಎಂದ ಯುವತಿ: "ನಾವಿಬ್ಬರು ಹೆಣ್ಣು ಮಕ್ಕಳಾಗಿದ್ದರೂ ನಾವು ಸಲಿಂಗ ಕಾಮ ಸಂಬಂಧ ಹೊಂದಿದ್ದೇವೆ. ನಾವು ಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ನಾವು ಒಟ್ಟಿಗೆ ಇರಲು ಬಯಸುತ್ತೇವೆ. ನನಗೆ ಗೊತ್ತು, ನಮ್ಮ ಸಮಾಜ ಅಥವಾ ಕುಟುಂಬವು ಈ ಸಂಬಂಧವನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ನಾವು ಒಬ್ಬರನ್ನೊಬ್ಬರು ಬಿಟ್ಟು ಇರಲು ಸಾಧ್ಯವಿಲ್ಲ. ಜೊತೆಗೆ, ನಾವಿಬ್ಬರೂ ವಯಸ್ಕರು ಮತ್ತು ಸಲಿಂಗಕಾಮವು ಈ ದೇಶದಲ್ಲಿ ಕಾನೂನುಬದ್ಧವಾಗಿದೆ" ಎಂದು ಫಲಕಟಾದ ಯುವತಿ ಹೇಳಿದರು.
"ಇದರಿಂದ ನಾವಿಬ್ಬರೂ ಮನೆಯಿಂದ ಓಡಿ ಹೋದೆವು. ಪೊಲೀಸರು ನಮ್ಮ ಮನೆಗೆ ತಿಳಿಸಿದ್ದಾರೆ. ಪೋಷಕರು ನಮ್ಮ ಸಂಬಂಧವನ್ನು ಒಪ್ಪಿಕೊಂಡರೆ, ನಾವು ಮನೆಗೆ ಹಿಂತಿರುಗುತ್ತೇವೆ. ಇಲ್ಲದಿದ್ದರೆ ನಾನು ಮನೆಗೆ ಹೋಗುವುದಿಲ್ಲ. ಆ ಸಂದರ್ಭದಲ್ಲಿ, ನಾವು ಕಾನೂನ ಅನ್ವಯ ಮುನ್ನಡೆಯುತ್ತೇವೆ” ಎಂದು ತಿಳಿಸಿದರು.
ತಮ್ಮ ಗೆಳತಿಯೊಂದಿಗೆ ಜೀವನ ಕಳೆಯುತ್ತೇನೆ: ಈ ಬಗ್ಗೆ ತುಫಾನ್‌ಗಂಜ್‌ನ ಯುವತಿ ಹೇಳುವಂತೆ, ಯಾರೂ ನಮ್ಮನ್ನು ಇಲ್ಲಿಗೆ ಕರೆ ತಂದಿಲ್ಲ. ನಾವಿಬ್ಬರೂ ತಮ್ಮ ಸ್ವಂತ ಮನೆಯಿಂದ ಬಿಟ್ಟು ಓಡಿ ಬಂದಿದ್ದೇವೆ. ಇಬ್ಬರೂ ಹುಡುಗಿಯರೇ ಆದರೂ, ನಮ್ಮ ನಡುವೆ ಪ್ರೇಮ ಸಂಬಂಧವಿದೆ ಎಂದರು. ನನ್ನ ಸ್ನೇಹಿತೆಗೆ ಒಂದು ತಿಂಗಳ ಹಿಂದೆ ಮದುವೆಯಾಗಿದೆ. ಆದರೆ, ಅವಳು ತನ್ನ ಗಂಡನನ್ನು ಇಷ್ಟಪಡುವುದಿಲ್ಲ. ತಮ್ಮ ಗೆಳತಿಯೊಂದಿಗೆ ಜೀವನ ಕಳೆಯಲು ಬಯಸುವುದಾಗಿ ತಿಳಿಸಿದ್ದಾಳೆ. ಈ ಸಂಬಂಧವನ್ನು ಎರಡು ಮನೆಯವರು ಒಪ್ಪದಿದ್ದರೆ, ಮನೆಗೆ ಮರಳುವುದಿಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದಾರೆ.
ಪೊಲೀಸರು ಹೇಳಿದ್ದೇನು?: ಇಬ್ಬರು ಯುವತಿಯರ ಕುಟುಂಬದ ಸದಸ್ಯರಿಂದ ಫಲಕಟಾ ಮತ್ತು ತುಫಂಗಂಜ್ ಪೊಲೀಸ್ ಠಾಣೆಗಳಲ್ಲಿ ಇಬ್ಬರ ಹೆಸರಿನಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಲ್ಡಾ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ. "ಅದಕ್ಕಾಗಿಯೇ ಇಬ್ಬರು ಯುವತಿಯರನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ. ಎರಡೂ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಕುಟುಂಬ ಸದಸ್ಯರು ಬಂದಾಗ, ಇಬ್ಬರನ್ನು ಅವರಿಗೆ ಒಪ್ಪಿಸಲಾಗುವುದು" ಎಂದು ಪೊಲೀಸರು ಮಾಹಿತಿ ನೀಡಿದರು.
ಇದನ್ನೂ ಓದಿ: ಬಿರುಕು ಬಿಟ್ಟಿರುವ 'ಗೇಟ್‌ವೇ ಆಫ್ ಇಂಡಿಯಾ', ಸರ್ಕಾರ ಸರಿಪಡಿಸಲಿದೆ: ಕೇಂದ್ರ ಸಚಿವ ಹರ್ದೀಪ್ ಪುರಿ ಹೇಳಿಕೆ