ಅರಾಹ್(ಬಿಹಾರ): ನಿವೃತ್ತ ಪ್ರಾಧ್ಯಾಪಕ ದಂಪತಿಯನ್ನು ಅವರ ಮನೆಗೆ ನುಗ್ಗಿ ಬರ್ಬರವಾಗಿ ಕೊಲೆಗೈದ ಪ್ರಕರಣ ಬಿಹಾರದ ಭೋಜ್‌ಪುರ ಜಿಲ್ಲೆಯ ಅರ್ರಾಹ್ ಎಂಬಲ್ಲಿ ನಡೆದಿದೆ. ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮೃತರನ್ನು ಮಹೇಂದ್ರ ಸಿಂಗ್ ಹಾಗೂ ಅವರ ಪತ್ನಿ ಪುಷ್ಪಾ ಸಿಂಗ್ ಎಂದು ಪೊಲೀಸರು ಗುರುತಿಸಿದ್ದಾರೆ.
ಕೊಲೆಯ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. 70 ವರ್ಷದ ನಿವೃತ್ತ ಪ್ರಾಧ್ಯಾಪಕ ಮಹೇಂದ್ರ ಸಿಂಗ್ ವೀರ್ ಅವರು ಈ ಹಿಂದೆ ಇಲ್ಲಿನ ವಿಶ್ವವಿದ್ಯಾಲಯವೊಂದರಲ್ಲಿ ಡೀನ್ ಆಗಿ ಕೆಲಸ ಮಾಡುತ್ತಿದ್ದರು. 65 ವರ್ಷದ ಪತ್ನಿ ಪುಷ್ಪಾ ಸಿಂಗ್ ಅರಾಹ್ ಮಹಿಳಾ ಕಾಲೇಜಿನಲ್ಲಿ ಮನೋವಿಜ್ಞಾನ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದರು. ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಹತ್ಯೆ ಮಾಡಿದ್ದಾರೆ. ಈ ಕೊಲೆ ಯಾವಾಗ ನಡೆದಿದೆ ಎಂಬ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎರಡೂ ಫೋನ್‌ಗಳು ಸ್ವಿಚ್ ಆಫ್: "ಭಾನುವಾರ ರಾತ್ರಿಯಿಂದ ದಂಪತಿ ಬಳಸುತ್ತಿದ್ದ ಎರಡೂ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು. ಸೋಮವಾರ ರಾತ್ರಿ ಅವರ ಸಂಬಂಧಿಕರು ಮನೆಗೆ ಬಂದಿದ್ದಾರೆ. ಮನೆಯ ಗೋಡೆಗಳ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ. ಪಾಟ್ನಾದಿಂದ ವಿಧಿ ವಿಜ್ಞಾನ ಪ್ರಯೋಗಾಲಯ ತಂಡವನ್ನು ಸ್ಥಳಕ್ಕೆ ಕರೆಸಿಕೊಂಡು ಮಾಹಿತಿ ಸಂಗ್ರಹಿಸಲಾಗಿದೆ" ಎಂದು ಎಸ್ಪಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಹೆಪ್ಪುಗಟ್ಟಿದ ರಕ್ತವನ್ನು ನೋಡಿದರೆ ಸುಮಾರು 10-12 ಗಂಟೆಗಳ ಹಿಂದೆ ಕೊಲೆ ನಡೆದಿರುವ ಶಂಕೆಯನ್ನು ಅವರು ಇದೇ ವೇಳೆ ವ್ಯಕ್ತಪಡಿಸಿದರು.
ಎಫ್‌ಎಸ್‌ಎಲ್ ತಂಡ ತಪಾಸಣೆ ನಡೆಸಿದ ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ. ದುಷ್ಕರ್ಮಿಗಳು ಮಹಿಳೆಯ ಮೇಲೆ ಹಲ್ಲೆ ನಡೆಸುವಾಗ ಆಕೆ ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿರಬಹುದು ಎಂದು ಪ್ರಾಥಮಿಕ ಸಾಕ್ಷ್ಯಗಳು ಸೂಚಿಸುತ್ತವೆ. ಮೃತ ಡಾ.ಮಹೇಂದ್ರ ಪ್ರಸಾದ್ ಸಿಂಗ್ ಅವರು 1980ರಲ್ಲಿ ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರೂ ಆಗಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಲೈಟ್ ಆನ್ ಆಫ್ ಮಾಡುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿದ ತಂದೆ: ಮಸಾಲೆ ರುಬ್ಬುವ ಕಲ್ಲಿನಿಂದ ಅಪ್ಪನ ಕೊಲೆ