ತಮಿಳುನಾಡು: ಕೆಲ ವರ್ಷಗಳ ಹಿಂದೆ ಜಗತ್ತಿನೆಲ್ಲೆಡೆ ಬಿಡುಗಡೆಯಾಗಿ ಭಾರಿ ಸದ್ದು ಮಾಡಿದ 'ಅವತಾರ್' ಎಂಬ ಹಾಲಿವುಡ್ ಚಿತ್ರದಲ್ಲಿ 'ಬಯೋಲ್ಯೂಮಿನೆಸೆಂಟ್ ವರ್ಲ್ಡ್ ಪಂಡೋರಾ' ಎಂಬುದು ಕಾಲ್ಪನಿಕವಾಗಿರಬಹುದು. ಆದರೆ, ಈ ವಿದ್ಯಮಾನವು ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿಜವಾಗಿದೆ!. ಪ್ರತಿ ವರ್ಷ ಬೇಸಿಗೆಯಲ್ಲಿ ರಾತ್ರಿ ವೇಳೆ ಮಿನುಗುವ ಅಗಣಿತ ಸಂಖ್ಯೆಯ ಮಿಂಚುಹುಳುಗಳು ಈ ಪ್ರಾಚೀನ ಅರಣ್ಯವನ್ನು ಸಂಪೂರ್ಣವಾಗಿ 'ಹಸಿರುಮಯ'ಗೊಳಿಸುತ್ತವೆ. ಈ ಕೀಟಗಳು ಇಲ್ಲಿ ಹುಲಿಗಳು ಮತ್ತು ಆನೆಗಳಿಗೆ ಪ್ರತಿಸ್ಪರ್ಧಿಯಾಗಿವೆ.
![ಜಗತ್ತಿನ ಎಂಟನೇ ಅದ್ಭುತ ಸೃಷ್ಠಿಸಿದ ಮಿಂಚುಹುಳುಗಳು: ಎಟಿಆರ್‌ನಲ್ಲಿ ವಿಶ್ಮಯ!](https://etvbharatimages.akamaized.net/etvbharat/prod-images/tn-cbe-05-minmini-visu-7208104_05052022181044_0505f_1651754444_751_0505newsroom_1651758413_849.jpg)
ಏಪ್ರಿಲ್ 2022 ರಲ್ಲಿ ಕ್ಷೇತ್ರ ನಿರ್ದೇಶಕರಾದ ಐಎಫ್ಎಸ್ ಅಧಿಕಾರಿ ರಾಮಸುಬ್ರಮಣ್ಯಂ ಅವರ ನಿರ್ದೇಶನದಲ್ಲಿ ಉಪನಿರ್ದೇಶಕರಾದ ಎಂ.ಜಿ.ಗಣೇಶನ್, ಸಾಫ್ಟ್‌ವೇರ್ ಇಂಜಿನಿಯರ್ ಶ್ರೀರಾಮ್ ಮುರಳಿ ಅವರು ಮಿಂಚುಹುಳುಗಳ ದೊಡ್ಡ ಗುಂಪನ್ನು ವೀಕ್ಷಿಸಲು ಕಾಡಿಗೆ ಹೋಗಿದ್ದರು. ಆಗ ಅವರಿಗೆ ಕಾಣಿಸಿದ್ದೇ ಜಗತ್ತಿನ ಎಂಟನೇ ಅದ್ಭುತದಂತೆ ಭಾಸವಾಗುವ ಈ ಅಪರೂಪದ ದೃಶ್ಯ!. ಇಲ್ಲಿ ಕೋಟಿಗಟ್ಟಲೆ ಮಿಂಚುಹುಳುಗಳು ಕಾಡಿನಾದ್ಯಂತ ತಮ್ಮ ಮಿಂಚುಗಳನ್ನು ಸಮನ್ವಯಗೊಳಿಸುತ್ತಿರುವುದು ಕಂಡುಬಂದಿದೆ. ಇಡೀ ಕಾಡು ಆ ವೇಳೆ ಹಳದಿ ಹಾಗೂ ಹಸಿರಿನ ಬಣ್ಣದಿಂದ ಚಿತ್ತಾಕರ್ಷಕವಾಗಿ ಹೊಳೆದಿದೆ.
![ಜಗತ್ತಿನ ಎಂಟನೇ ಅದ್ಭುತ ಸೃಷ್ಠಿಸಿದ ಮಿಂಚುಹುಳುಗಳು: ಎಟಿಆರ್‌ನಲ್ಲಿ ವಿಶ್ಮಯ!](https://etvbharatimages.akamaized.net/etvbharat/prod-images/tn-cbe-05-minmini-visu-7208104_05052022181044_0505f_1651754444_536_0505newsroom_1651758413_463.jpg)
ಸಂಗಾತಿಗಾಗಿ ಮಿಂಚು: ಮರಗಳ ಮೇಲೆ ಕುಳಿತಿರುವ ಗಂಡು ಮಿಂಚುಹುಳುಗಳು ಸಂಭಾವ್ಯ ಸಂಗಾತಿಗಳನ್ನು ಹುಡುಕಲು ಈ ಬೆಳಕಿನ ಪ್ರದರ್ಶನಗಳನ್ನು ಮಾಡುತ್ತವಂತೆ. ಕಾಡಿನಲ್ಲಿ ಸಮಾನ ಸಂಖ್ಯೆಯ ಹೆಣ್ಣುಹುಳುಗಳಿದ್ದರೂ ಅವು ಮಿನುಗುವುದಿಲ್ಲ. ವಯಸ್ಕ ಹುಳುಗಳು ಕೆಲವು ವಾರಗಳವರೆಗೆ ಮಾತ್ರ ಬದುಕುತ್ತವೆ ಮತ್ತು ಮಕರಂದ ಹಾಗೂ ಪರಾಗವನ್ನು ತಿನ್ನುತ್ತವೆ.
ಮಿಂಚು ಬರುವುದು ಹೇಗೆ?: ಮಿಂಚುಹುಳುಗಳು ತಮ್ಮ ಹೊಟ್ಟೆಯ ಅಡಿಯಲ್ಲಿ ಆಮ್ಲಜನಕವನ್ನು ತೆಗೆದುಕೊಳ್ಳುವ ಬೆಳಕಿನ ಅಂಗಗಳನ್ನು ಸಮರ್ಪಿಸುತ್ತವೆ. ವಿಶೇಷ ಕೋಶಗಳೊಳಗೆ ಆಮ್ಲಜನಕವು ಬೆಳಕನ್ನು ಉತ್ಪಾದಿಸಲು ಲೂಸಿಫೆರಿನ್ ಎಂಬ ವಸ್ತುವಿನೊಂದಿಗೆ ಸಂಯೋಜಿಸುತ್ತದೆ. ಮಿಂಚುಹುಳುಗಳ ಬೆಳಕು 100% ಪರಿಣಾಮಕಾರಿಯಾಗಿದೆ ಮತ್ತು ಯಾವುದೇ ತ್ಯಾಜ್ಯವನ್ನು ಉತ್ಪಾದಿಸುವುದಿಲ್ಲವಂತೆ.
![ಜಗತ್ತಿನ ಎಂಟನೇ ಅದ್ಭುತ ಸೃಷ್ಠಿಸಿದ ಮಿಂಚುಹುಳುಗಳು: ಎಟಿಆರ್‌ನಲ್ಲಿ ವಿಶ್ಮಯ!](https://etvbharatimages.akamaized.net/etvbharat/prod-images/tn-cbe-05-minmini-visu-7208104_05052022181044_0505f_1651754444_1083_0505newsroom_1651758413_181.jpg)
ಯುಎಸ್ಎಯಲ್ಲಿನ ಫೈರ್ ಫ್ಲೈ ವಿಜ್ಞಾನಿಗಳೊಂದಿಗಿನ ಸಂವಹನಗಳ ಮೂಲಕ ಸಂದರ್ಶಕ ಸಂಶೋಧಕರು 1999ರಲ್ಲಿ ಇಲ್ಲಿ ಸಿಂಕ್ರೊನಸ್ ನಡವಳಿಕೆಯನ್ನು ಗುರುತಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಯಾವುದೇ ಸಂಶೋಧನಾ ಪ್ರಬಂಧವನ್ನು ಈ ಬಗ್ಗೆ ಪ್ರಕಟಿಸಿಲ್ಲ. ಕೊಯಮತ್ತೂರಿನ ಇನ್‌ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಜೆನೆಟಿಕ್ಸ್ ಮತ್ತು ಟ್ರೀ ಬ್ರೀಡಿಂಗ್‌ನ ಸಂಶೋಧಕರ ತಂಡವು 2012 ರಲ್ಲಿ ಈ ವಿಶೇಷ ವಿದ್ಯಮಾನವನ್ನು ಗಮನಿಸಿತ್ತು.
ಜಗತ್ತಿನಲ್ಲಿ 2,000ಕ್ಕೂ ಹೆಚ್ಚು ಜಾತಿಯ ಮಿಂಚುಹುಳುಗಳಿವೆಯಂತೆ. ಆದರೆ ಬೆರಳೆಣಿಕೆಯಷ್ಟು ಮಾತ್ರ ಸಿಂಕ್ರೊನಸ್ ಆಗಿವೆ. ಎಟಿಆರ್‌ನಲ್ಲಿ ಕಂಡುಬರುವ ಮಿಂಚುಹುಳುಗಳು ಅಬ್ಸ್‌ಕಾಂಡಿಟಾ ಜಾತಿಗೆ ಸೇರಿದವಾಗಿವೆ. ಇವು ಹೊಸ ಜಾತಿಯಾಗಿರಬಹುದು ಎಂದು ಸಹ ವಿಜ್ಞಾನಿಗಳು ಹೇಳುತ್ತಾರೆ. ಇವುಗಳನ್ನು ಸರಿಯಾಗಿ ಗುರುತಿಸಲು ವಿವರವಾದ ಸಂಶೋಧನೆ ಮತ್ತು ಡಿಎನ್ಎ ಅನುಕ್ರಮದ ಅಗತ್ಯವಿದೆ. ಅವು ಕಪ್ಪು ಪಟ್ಟೆಗಳೊಂದಿಗೆ ಕಂದು ಬಣ್ಣ ಹೊಂದಿವೆ. ಸಂಕೀರ್ಣವಾದ ಮಾದರಿಗಳೊಂದಿಗೆ ದುಂಡಗಿನ ಕಣ್ಣುಗಳು ಮತ್ತು ಒಂದು ಸೆಂಟಿಮೀಟರ್‌ಗಿಂತ ಕಡಿಮೆ ಉದ್ದಹೊಂದಿವೆ.
ಭಾರತದಲ್ಲಿ, ಮಹಾರಾಷ್ಟ್ರ ಮತ್ತು ನೆರೆಯ ಪರಂಬಿಕುಲಂ ಮತ್ತು ನೆಲ್ಲಿಯಂಪತಿಯ ಕೆಲವು ಸ್ಥಳಗಳಲ್ಲಿ ಸಿಂಕ್ರೊನಸ್ ಮಿಂಚುಹುಳುಗಳು ಕಂಡುಬರುತ್ತವೆ. ಕ್ಷೇತ್ರ ನಿರ್ದೇಶಕ ರಾಮಸುಬ್ರಮಣ್ಯಂ ಅವರ ನೇತೃತ್ವದಲ್ಲಿ ಉಪನಿರ್ದೇಶಕರಾದ ಎಂ.ಜಿ.ಗಣೇಶನ್, ಅರಣ್ಯ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಸಂರಕ್ಷಣಾ ತಜ್ಞರ ತಂಡವು ಈ ಮಿಂಚುಹುಳುಗಳ ಪರಿಸರ ವಿಜ್ಞಾನ ಮತ್ತು ಜೀವನ ಚಕ್ರದ ಬಗ್ಗೆ ಅವುಗಳ ಮರಗಳ ಆಯ್ಕೆ ಮತ್ತು ಇತರ ವನ್ಯಜೀವಿಗಳೊಂದಿಗಿನ ಅವುಗಳ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಮುಂದಾಗಿದ್ದಾರೆ.
![ಜಗತ್ತಿನ ಎಂಟನೇ ಅದ್ಭುತ ಸೃಷ್ಠಿಸಿದ ಮಿಂಚುಹುಳುಗಳು: ಎಟಿಆರ್‌ನಲ್ಲಿ ವಿಶ್ಮಯ!](https://etvbharatimages.akamaized.net/etvbharat/prod-images/tn-cbe-05-minmini-visu-7208104_05052022181044_0505f_1651754444_253_0505newsroom_1651758413_753.jpg)
ಈ ವಿದ್ಯಮಾನವು ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶವನ್ನು ರಕ್ಷಿಸಲು ಶ್ರಮಿಸಿದ ಹಲವಾರು ಉತ್ಸಾಹಿ ಅಧಿಕಾರಿಗಳ ದಶಕಗಳ ಸಂರಕ್ಷಣಾ ಕೆಲಸದ ಫಲಿತಾಂಶವಾಗಿದೆ. ಪ್ರಪಂಚದಾದ್ಯಂತ ಫೈರ್ ಫ್ಲೈ ಜನಸಂಖ್ಯೆಯು ಕ್ಷೀಣಿಸುತ್ತಿದೆ ಮತ್ತು ಈ ಅತ್ಯಂತ ಅಪರೂಪದ ಆಕಾಶದ ಅದ್ಭುತವನ್ನು ನಮ್ಮ ಭವಿಷ್ಯದ ಪೀಳಿಗೆಗೆ ರಕ್ಷಿಸಬೇಕಿದೆ.
ಇದನ್ನೂ ಓದಿ: ಬೈಕ್ನಲ್ಲೇ ಪುಟ್ಟ ಮಗಳ ಶವ ಹೊತ್ತೊಯ್ದ ತಂದೆ; ತಿರುಪತಿಯಲ್ಲಿ ಕರುಳರಿಯುವ ಘಟನೆ