ಬಾಗ್‌ಪತ್(ಉತ್ತರ ಪ್ರದೇಶ): ಐಸಿಸಿ ಟಿ-20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋಲು ಕಾಣುತ್ತಿದ್ದಂತೆ ಸಂಪೂರ್ಣ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ತರಹೇವಾರಿ ಮಾತು ಕೇಳಿ ಬರಲು ಶುರುವಾಗಿವೆ. ಅಸಾದುದ್ದೀನ್ ಓವೈಸಿ ಬೆನ್ನಲ್ಲೇ ಇದೀಗ ರಾಕೇಶ್ ಟಿಕಾಯತ್ ಕೂಡ ವಿಚಿತ್ರವಾದ ಹೇಳಿಕೆ ನೀಡಿದ್ದಾರೆ.
ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದಿರುವ ಅವರು, ಮ್ಯಾಚ್ ಫಿಕ್ಸಿಂಗ್ ಮಾಡುವ ಮೂಲಕ ಬಿಜೆಪಿ ಸರ್ಕಾರ ಪಾಕಿಸ್ತಾನದ ಕೈಯಲ್ಲಿ ಟೀಂ ಇಂಡಿಯಾ ಸೋಲಿಸಿದೆ ಎಂದಿದ್ದಾರೆ. ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಮಾತನಾಡಿರುವ ಅವರು,ಭಾರತದ ಸೋಲಿಗೆ ಬಿಜೆಪಿ ನೇರ ಹೊಣೆ. ಪಾಕ್ ವಿರುದ್ಧ ಭಾರತ ಸೋಲು ಕಂಡರೆ ತಮಗೆ ವಿವಿಧ ಸಮುದಾಯಗಳ ಮತಗಳು ಬರುತ್ತವೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಆದ ಕಾರಣ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಫಿಕ್ಸಿಂಗ್ ಮಾಡಿಸುವ ಮೂಲಕ ಟೀಂ ಇಂಡಿಯಾ ಸೋಲಿಸಿದ್ದಾರೆ. ಫಿಕ್ಸಿಂಗ್ ಮೂಲಕ ಟೀಂ ಇಂಡಿಯಾ ಸೋಲಿಸಬಹುದು ಎಂಬುದು ಬಿಜೆಪಿಗೆ ಗೊತ್ತಿದೆ ಎಂದಿದ್ದಾರೆ.
ಮೋದಿ ಸರ್ಕಾರಕ್ಕೆ ಕೇವಲ ಮತಗಳು ಬೇಕು. ದೇಶದೊಂದಿಗೆ ಯಾವುದೇ ರೀತಿಯ ಬಾಂಧವ್ಯ ಬೇಕಾಗಿಲ್ಲ ಎಂದು ತಿಳಿಸಿದ್ದಾರೆ. ಮೋದಿ ಸರ್ಕಾರ ಎಲ್ಲರ ದಾರಿ ತಪ್ಪಿಸುತ್ತಿದೆ. ದೇಶದ ಅಭಿವೃದ್ಧಿ ಸಂಪೂರ್ಣವಾಗಿ ನಿಂತು ಹೋಗಿದೆ. ಕೃಷಿ ಕಾನೂನು ರೈತರಿಗೆ ಕಪ್ಪು ಚುಕ್ಕೆಯಾಗಿದ್ದು, ಕೇಂದ್ರ ಸರ್ಕಾರ ಈಗಾಗಲೇ ದೇಶದ ಅರ್ಧಭಾಗ ಮಾರಾಟ ಮಾಡಿದೆ ಎಂದರು.