ರಜೌರಿ (ಜಮ್ಮು ಕಾಶ್ಮೀರ) : ಜಮ್ಮು ಪ್ರಾಂತ್ಯದ ಗಡಿ ಜಿಲ್ಲೆ ರಜೌರಿಯಲ್ಲಿ ಭದ್ರತಾ ಪಡೆಗಳು ಗುರುವಾರ ಶೋಧ ಕಾರ್ಯಾಚರಣೆ ನಡೆಸಿ ವೈರ್‌ಲೆಸ್ ಸೆಟ್, ಒಂದು ಟೇಪ್ ರೆಕಾರ್ಡರ್, ನಾಲ್ಕು ಟಿನ್ ಐಇಡಿ ಬಾಕ್ಸ್‌ಗಳು ಮತ್ತು ಗುಂಡಿನ 23 ರೌಂಡ್ಸ್ಗಳನ್ನು ವಶಪಡಿಸಿಕೊಂಡಿವೆ.
ಜಿಲ್ಲೆಯ ಹಯಾತ್‌ಪುರ, ಮಂಜಕೋಟ್ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಈ ವೇಳೆ ಅವರು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ರಜೌರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜಮ್ಮು ಪ್ರಾಂತ್ಯದ ಗಡಿ ಪ್ರದೇಶಗಳಲ್ಲಿ ವಿಶೇಷವಾಗಿ ಪೂಂಚ್ ಮತ್ತು ರಜೌರಿಯಲ್ಲಿ ಭದ್ರತಾ ಪಡೆಗಳ ಕಾವಲನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂಬುದು ಗಮನಾರ್ಹ. ಭದ್ರತಾ ಪಡೆಗಳು ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತಾರಾಷ್ಟ್ರೀಯ ಗಡಿ (ಐಬಿ) ಬಳಿ ಒಳನುಸುಳುವಿಕೆಯನ್ನು ತಡೆಯಲು ಹೈಟೆಕ್ ಭದ್ರತಾ ಕ್ಯಾಮರಾಗಳು ಮತ್ತು ಡ್ರೋನ್‌ಗಳನ್ನು ಸಹ ಬಳಸಲಾಗುತ್ತಿದೆ.
ಪೂಂಚ್ ಮತ್ತು ರಜೌರಿಯಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿಯನ್ನು ಗಮನದಲ್ಲಿಟ್ಟುಕೊಂಡು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನೆ ಮತ್ತು ಬಿಎಸ್‌ಎಫ್‌ನ ಹಿರಿಯ ಅಧಿಕಾರಿಗಳೊಂದಿಗೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಗಡಿ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಬಿಎಸ್‌ಎಫ್ ಮಹಾನಿರ್ದೇಶಕ ನಿತಿನ್ ಅಗರ್ವಾಲ್ ಅವರು ಬುಧವಾರ ಗಡಿ ಪ್ರದೇಶಗಳಿಗೆ ಭೇಟಿ ನೀಡಿ, ಭದ್ರತಾ ಪರಿಸ್ಥಿತಿ ಮತ್ತು ಕಾರ್ಯಾಚರಣೆಯ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಡಿಜಿ, ಬಿಎಸ್‌ಎಫ್ ಕೂಡ ಫಾರ್ವರ್ಡ್ ಪೋಸ್ಟ್‌ಗಳಿಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಅಗರ್ವಾಲ್ ಜಮ್ಮುವಿನಲ್ಲಿ ಎರಡು ದಿನಗಳ ಕಾಲ ಇರಲಿದ್ದಾರೆ ಎಂದು ತಿಳಿದುಬಂದಿದೆ.
ಚೀನಾ ನಿರ್ಮಿತ ಪಾಕಿಸ್ತಾನಿ ಡ್ರೋನ್ ವಶ (ಪ್ರತ್ಯೇಕ ಘಟನೆ) : ಸಮಾಜ ವಿರೋಧಿ ಶಕ್ತಿಗಳು ಮತ್ತು ದೇಶ ವಿರೋಧಿಗಳ ತಂತ್ರಗಳನ್ನು ವಿಫಲಗೊಳಿಸುವ ಸಲುವಾಗಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಜವಾನರು ಮತ್ತು ಪಂಜಾಬ್ ಪೊಲೀಸರು ಗಡಿ ಗ್ರಾಮಗಳಲ್ಲಿ ಜಂಟಿ ಶೋಧ ಕಾರ್ಯಾಚರಣೆ (ಡಿಸೆಂಬರ್- 27-23) ನಡೆಸಿದ್ದರು.
ನೆರೆಯ ರಾಷ್ಟ್ರ ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಮಾರಣಾಂತಿಕ ಡ್ರಗ್ಸ್ ಮತ್ತು ಇತರ ಶಸ್ತ್ರಾಸ್ತ್ರಗಳ ಸರಬರಾಜು ಮಾಡುವ ಮೂಲಕ ದೇಶದ ಯುವಕರ ಜೀವನ ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಪ್ರಯತ್ನವೊಂದನ್ನು ಇದೀಗ ಪೊಲೀಸರು ಮತ್ತು ಬಿಎಸ್‌ಎಫ್ ಜಂಟಿಯಾಗಿ ವಿಫಲಗೊಳಿಸಿದ್ದು, ಚೀನಾದಲ್ಲಿ ತಯಾರಾದ ಪಾಕಿಸ್ತಾನದ ಡ್ರೋನ್ ಅನ್ನು ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ: ಬಿಎಸ್ಎಫ್- ಪಂಜಾಬ್ ಪೊಲೀಸರ ಜಂಟಿ ಕಾರ್ಯಾಚರಣೆ: ಚೀನಾ ನಿರ್ಮಿತ ಪಾಕಿಸ್ತಾನಿ ಡ್ರೋನ್ ವಶಕ್ಕೆ