ವಿಜಯವಾಡ(ಆಂಧ್ರಪ್ರದೇಶ): ಇತ್ತೀಚೆಗೆ ಪ್ರಧಾನಿ ಭೇಟಿ ನೀಡಿದ ದಿನ ಗನ್ನವರಂ ವಿಮಾನ ನಿಲ್ದಾಣ ಪರಿಸರದಲ್ಲಿ ಕಪ್ಪು ಬಲೂನ್ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜೀವ್ ರತನ್ ಗನ್ನವರಂ ಪೊಲೀಸ್ ಠಾಣೆಗೆ ಗುರುವಾರ ಶರಣಾಗಿದ್ದಾರೆ. ತಲೆಮರೆಸಿಕೊಂಡಿದ್ದ ರಾಜೀವ್ ರತನ್ ಅವರ ಬಂಧನಕ್ಕೆ ಮೂರು ದಿನಗಳಿಂದ ಪೊಲೀಸ್ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದವು. ಇಂದು ಪಕ್ಷದ ಮುಖಂಡರ ಜತೆ ಠಾಣೆಗೆ ಬಂದ ರಾಜೀವ್ ಕೊನೆಗೂ ಪೊಲೀಸರ ಮುಂದೆ ಶರಣಾಗಿದ್ದಾರೆ.
ಏನಾಗಿತ್ತು? : ಜುಲೈ 4 ರಂದು ಪಶ್ಚಿಮ ಗೋದಾವರಿ ಜಿಲ್ಲೆಗೆ ಪ್ರಧಾನಿ ಭೇಟಿಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಹಲವೆಡೆ ಪ್ರತಿಭಟನೆ ನಡೆಸಿದ್ದರು. ಪ್ರಧಾನಿ ಮೋದಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ವಿಮಾನ ನಿಲ್ದಾಣದಿಂದ ಟೇಕಾಫ್ ಆಗುವ ವೇಳೆ ಗನ್ನವರಂ ವಿಮಾನ ನಿಲ್ದಾಣದ ಪರಿಸರದಲ್ಲಿ ಕಪ್ಪು ಬಲೂನ್ ಹಾರಿಸಿ ಪ್ರತಿಭಟನೆ ನಡೆಸಿದ್ದರು.
ಪ್ರಧಾನಿ ಹೆಲಿಕಾಪ್ಟರ್ ಭೇಟಿ ವೇಳೆ ಬಲೂನ್ ಹಾರಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೃಷ್ಣಾ ಜಿಲ್ಲಾ ಪೊಲೀಸರು ಪಿಸಿಸಿ ಪ್ರಧಾನ ಕಾರ್ಯದರ್ಶಿ ಪರಸಾ ರಾಜೀವ್ ರತನ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಆರೋಪಿ ರಾಜೀವ್ ಮತ್ತು ಇತರ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 353, 341, 188 ಮತ್ತು 145 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೋದಿ ಹೆಲಿಕಾಪ್ಟರ್ ಹೊರಟ ಐದು ನಿಮಿಷಗಳ ನಂತರ ಬಲೂನ್‌ಗಳು ಹಾರಾಡಿದ್ದು, ವಿಮಾನ ನಿಲ್ದಾಣದಿಂದ 4.5 ಕಿಲೋಮೀಟರ್ ದೂರದಲ್ಲಿರುವ ಸೂರಂಪಲ್ಲಿಯಿಂದ ಬಲೂನ್‌ಗಳನ್ನು ಹಾರಿಸಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : Kaali poster row: ಲೀನಾ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸುವಂತೆ ಗೃಹ ಸಚಿವರ ಆಗ್ರಹ