ಉದಯ್‌ಪುರ್(ರಾಜಸ್ಥಾನ) : ದಿನದಿಂದ ದಿನಕ್ಕೆ ರಾಷ್ಟ್ರಮಟ್ಟದಲ್ಲಿ ಕ್ಷೀಣಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಮತ್ತೆ ಬಲಪಡಿಸುವ ಉದ್ದೇಶದಿಂದ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಯಾತ್ರೆ ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮೂರು ದಿನಗಳ ಚಿಂತನ್ ಶಿಬಿರ ಇಂದು ಮುಕ್ತಾಯಗೊಳ್ಳುತ್ತಿದೆ. 2024ರ ಲೋಕಸಭೆ ಚುನಾವಣೆ ಹಾಗೂ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷವನ್ನು ಹೇಗೆ ಸಜ್ಜುಗೊಳಿಸಬೇಕು ಎಂದು ಕಳೆದ 2 ದಿನದಿಂದ ಚರ್ಚಿಸಲಾಗಿದೆ. ಜೊತೆಗೆ ಪಾದಯಾತ್ರೆ ಕುರಿತು ಸಹ ಮಾತುಕತೆ ನಡೆದಿದ್ದು, ಈ ವರ್ಷದ ಕೊನೆಯಲ್ಲಿ ಕಾಲ್ನಡಿಗೆ ಮೆರವಣಿಗೆ ನಡೆಯಲಿದೆ ಎನ್ನಲಾಗಿದೆ.
ಬಿಜೆಪಿ ಸರ್ಕಾರದ ವೈಫಲ್ಯಗಳು ಮತ್ತು ಜನರ ದುಃಸ್ಥಿತಿಯನ್ನು ಎತ್ತಿ ಹಿಡಿಯಲು ರಾಜ್ಯ ನಾಯಕರು ಪ್ರತಿ ರಾಜ್ಯದಲ್ಲೂ ಇದೇ ರೀತಿಯ ಪಾದಯಾತ್ರೆ ಆಯೋಜಿಸಬೇಕು. ಹಣದುಬ್ಬರ ಮತ್ತು ಆರ್ಥಿಕ ವಿಷಯಗಳ ಕುರಿತು ಸರ್ಕಾರದ ವಿರುದ್ಧ ಸಾಮೂಹಿಕ ಆಂದೋಲನ ಕಾರ್ಯಕ್ರಮವನ್ನು ನಡೆಸುವಂತೆ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಪಾದಯಾತ್ರೆ ಕುರಿತು ಮಾತನಾಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆಯು "ಸಾಮರಸ್ಯ"ದ ಮೇಲೆ ನಡೆಯಲಿದೆ. ದೇಶದ ಜನ ಭಯ, ಅಭದ್ರತೆಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರನ್ನು ಬಲಿಪಶುಗಳನ್ನಾಗಿ ಮಾಡಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಕಾಂಗ್ರೆಸ್ 'ಚಿಂತನ್ ಶಿಬಿರ' ಇಂದು ಸಮಾಪನ; ಮೈಕೊಡವಿ ಎದ್ದು ನಿಲ್ಲಲು ಕಾಂಗ್ರೆಸ್ ರಣತಂತ್ರ