ನವದೆಹಲಿ: ಹಣದುಬ್ಬರ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ದೆಹಲಿಯ ವಿಜಯ್ ಚೌಕ್‌ನಲ್ಲಿ ಕಾಂಗ್ರೆಸ್ ಸಂಸದರು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ, ಸತತವಾಗಿ ಏರಿಕೆಯಾಗುತ್ತಿರುವ ತೈಲ ಬೆಲೆ ನಿಯಂತ್ರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ 10 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಒಂಬತ್ತು ಬಾರಿ ಏರಿಕೆಯಾಗಿದ್ದು, ಇದರಿಂದ ಸಾಮಾನ್ಯ ಜನರು ಹೆಚ್ಚು ತೊಂದರೆಗೀಡಾಗಿದ್ದಾರೆ. ತೈಲ ಬೆಲೆ ಏರಿಕೆಯಿಂದಾಗಿ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಗಳಿಸುತ್ತಿದೆ. ಕೂಡಲೇ ಇದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಲಿದೆ, ಜನರು ತಮ್ಮ ಟ್ಯಾಂಕ್‌ಗಳನ್ನು ತುಂಬಿಸಿಕೊಳ್ಳುವಂತೆ ಹೇಳಿದ್ದೆ. ಹಿಂದೆಂದಿಗಿಂತಲೂ ತೈಲ ಬೆಲೆ ಹೆಚ್ಚಳವಾಗಿದೆ. ಸರ್ಕಾರ ಬಡವರ ಹಣವನ್ನು ಕದ್ದು ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸಂಸದರು ಫಲಕಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಉಪಸ್ಥಿತರಿದ್ದರು.
ಪ್ರಿಯಾಂಕಾ ಪ್ರತಿಭಟನೆ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಗಾಂಧಿ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಪ್ರತಿ ಲೀಟರ್‌ಗೆ ತಲಾ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ 10 ದಿನಗಳಲ್ಲಿ ಒಟ್ಟು 6.40 ರೂಪಾಯಿ ಹೆಚ್ಚಳವಾಗಿದೆ.
ಇದನ್ನೂ ಓದಿ: ಮತ್ತೆ ಪೆಟ್ರೋಲ್, ಡೀಸೆಲ್ ಲೀಟರ್‌ಗೆ 80 ಪೈಸೆ ಏರಿಕೆ; ಒಟ್ಟು 6.40 ರೂಪಾಯಿ ಹೆಚ್ಚಳ