ನವದೆಹಲಿ : ಗಣರಾಜ್ಯೋತ್ಸವದಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ನಲ್ಲಿ ಪಂಜಾಬಿ ನಟ ದೀಪ್ ಸಿಧು ಮತ್ತು ದರೋಡೆಕೋರ ಲಕ್ಕಾ ಸದನಾ ಹೆಸರುಗಳನ್ನು ಸೇರಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ (ಐಪಿಸಿ), ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆಗಟ್ಟುವಿಕೆ ಕಾಯ್ದೆ ಮತ್ತು ಇತರ ಕಾಯ್ದೆಯಡಿ ದೆಹಲಿ ಪೊಲೀಸರು ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಪರೇಡ್ನಲ್ಲಿ ಭಾಗವಹಿಸಿದ್ದ ದೀಪ್ ಸಿಧು ಕೆಂಪು ಕೋಟೆಗೆ ನುಗ್ಗಿ, ಸಿಖ್ ಧ್ವಜ ಹಾರಿಸುವಂತೆ ಒಬ್ಬ ವ್ಯಕ್ತಿಗೆ ಧ್ವಜವನ್ನು ಹಸ್ತಾಂತರಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೆ ಧ್ವಜ ಹಾರಿಸುವ ವೇಳೆ ಸಿಧು ಫೇಸ್ಬುಕ್ ಲೈವ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಇನ್ನೊಂದೆಡೆ ಕಳೆದ ವಾರ ಪಂಜಾಬ್ ರೈತ ನಾಯಕ ಬಲದೇವ್ ಸಿಂಗ್ ಸಿರ್ಸಾ ಸೇರಿದಂತೆ ಸುಮಾರು 40 ಮಂದಿಗೆ ಎನ್‌ಐಎ ಸಮನ್ಸ್ ಜಾರಿ ಮಾಡಿತ್ತು. ಅವರಲ್ಲಿ ಪಂಜಾಬಿ ನಟ ದೀಪ್ ಸಿಧು ಹೂಡಾ ಒಬ್ಬರಾಗಿದ್ದರು. ಅಮೆರಿಕ ಮೂಲದ ಖಲಿಸ್ತಾನ್ ಪರ ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್‌ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಸಮನ್ಸ್ನಲ್ಲಿ ತಿಳಿಸಿತ್ತು.
ರೈತರ ಟ್ರಾಕ್ಟರ್ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ 19 ಜನರನ್ನು ಬಂಧಿಸಲಾಗಿದೆ ಮತ್ತು ದೆಹಲಿ ಪೊಲೀಸರು 25ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ.