ಚಂಡೀಗಢ (ಪಂಜಾಬ್): ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಭಯೋತ್ಪಾದಕ ದಾಳಿಗಳ ಎಚ್ಚರಿಕೆ ಬೆನ್ನಲ್ಲೆ ಪಂಜಾಬ್ ಪೊಲೀಸರು ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಭಯೋತ್ಪಾದಕ ಸಂಚನ್ನು ಭೇದಿಸಿದ್ದಾರೆ. ಈ ಮೂಲಕ ಸಂಭವನೀಯ ದಾಳಿಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆನಡಾ ಮತ್ತು ಆಸ್ಟ್ರೇಲಿಯಾ ಮೂಲದ ಗ್ಯಾಂಗ್ಸ್ಟರ್ ಜೊತೆ ಸಂಬಂಧ ನಂಟು ಹೊಂದಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು, ಮೂರು ಹ್ಯಾಂಡ್ ಗ್ರೆನೇಡ್‌ಗಳು, ಒಂದು ಐಇಡಿ ಮತ್ತು ಎರಡು 9 ಎಂಎಂ ಪಿಸ್ತೂಲ್‌ಗಳು ಮತ್ತು 40 ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ದೆಹಲಿ ಪೊಲೀಸರ ನೆರವಿನೊಂದಿಗೆ ಪಂಜಾಬ್ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೊಗಾದ ದೀಪಕ್ ಶರ್ಮಾ, ಫಿರೋಜ್‌ಪುರದ ಸಂದೀಪ್ ಸಿಂಗ್ ಮತ್ತು ದೆಹಲಿಯ ಸನ್ನಿ ದಾಗರ್ ಮತ್ತು ವಿಪಿನ್ ಜಖರ್ ಎಂದು ಗುರುತಿಸಲಾಗಿದೆ. ಕೆನಡಾ ಮೂಲದ ಅರ್ಶ್ ದಲ್ಲಾ ಮತ್ತು ಆಸ್ಟ್ರೇಲಿಯಾ ಮೂಲದ ಗುರ್ಜಂತ್ ಸಿಂಗ್ ಅವರೊಂದಿಗೆ ಬಂಧಿತರು ಸಂಪರ್ಕ ಹೊಂದಿದ್ದರು ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.
ಮಣಿಪುರದಲ್ಲಿ ಎಂಟು ಜನರ ಸೆರೆ: ಇತ್ತ, ಮಣಿಪುರದಲ್ಲೂ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಹಿಂಸಾಚಾರ ಸೃಷ್ಟಿಸುವ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಮಣಿಪುರದ ನಾಲ್ಕು ಜಿಲ್ಲೆಗಳಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ)ಯ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಎರಡು 9 ಎಂಎಂ ಪಿಸ್ತೂಲ್‌ಗಳು, ಮ್ಯಾಗಜೀನ್‌ಗಳು, 35 ಜೀವಂತ ಗುಂಡುಗಳು ಮತ್ತು ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜೈಶ್-ಎ-ಮೊಹಮ್ಮದ್ ಸಂಘಟನೆ ಜೊತೆ ನಂಟು: ಕಾನ್ಪುರದಲ್ಲಿ ಶಂಕಿತ ಉಗ್ರನ ಸೆರೆ, ಹೈಅಲರ್ಟ್