ನವದೆಹಲಿ: ಪಿಎಂ ಮೋದಿ ತಮ್ಮ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ನ 73ನೇ ಸಂಚಿಕೆಯಲ್ಲಿ ಹೈದರಾಬಾದ್ ನಗರದ ಸ್ಥಳೀಯ ತರಕಾರಿ ಮಾರುಕಟ್ಟೆಯಾದ ಬೋವೆನ್‌ಪಲ್ಲಿ ಸಬ್ಜಿ ಮಂಡಿಯನ್ನು ಶ್ಲಾಘಿಸಿದ್ದಾರೆ. ಇಲ್ಲಿ ತರಕಾರಿ ತ್ಯಾಜ್ಯಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸಲಾಗುತ್ತಿದೆ ಎಂದಿದ್ದಾರೆ.
ಸಬ್ಜಿ(ತರಕಾರಿ) ಮಂಡಿಗಳಲ್ಲಿ ವ್ಯಾಪಾರವಾಗದೆ ತರಕಾರಿಗಳು ಕೊಳೆಯುತ್ತಿದ್ದು, ಆರೋಗ್ಯಕರವಲ್ಲದ ವಾತಾವರಣ ಇರುವುದನ್ನು ನಾವು ಗಮನಿಸಿರುತ್ತೇವೆ. ಅಂತಹ ತರಕಾರಿಗಳಿಂದಲೇ ಹೈದರಾಬಾದ್‌ನ ಬೋವೆನ್‌ಪಲ್ಲಿ ಸಬ್ಜಿ ಮಂಡಿಯ ವ್ಯಾಪಾರಿಗಳು ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಇದು ನಾವೀನ್ಯತೆಯ ಶಕ್ತಿ ಎಂದು ಹೇಳಿದರು.
ಬೋವೆನ್‌ಪಲ್ಲಿ ಸಬ್ಜಿ ಮಂಡಿಯಲ್ಲಿ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸಲಾಗುತ್ತಿದೆ. ಇದು ಕಸವನ್ನು ರಸವಾಗಿ ಪರಿವರ್ತಿಸುವ ಮಾರ್ಗವಾಗಿದೆ. ಅಲ್ಲಿ ಪ್ರತಿದಿನ ಸುಮಾರು 10 ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ. ಅದರಿಂದ ಪ್ರತಿದಿನ 500 ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಉಳಿದವುಗಳಿಂದ ಸುಮಾರು 30 ಕೆಜಿಯಷ್ಟು ಜೈವಿಕ ಇಂಧನವನ್ನು ತಯಾರಿಸಲಾಗುತ್ತಿದೆ ಎಂದರು.
ಇನ್ನು ಈ ತ್ಯಾಜ್ಯ ವಸ್ತುಗಳಿಂದ ಉತ್ಪತ್ತಿಯಾಗುವ ವಿದ್ಯುತ್ಅನ್ನು ಅದೇ ಮಂಡಿಯನ್ನು ಬೆಳಗಿಸಲು ಬಳಸಲಾಗುತ್ತದೆ. ಜೈವಿಕ ಇಂಧನವನ್ನು ಮಂಡಿಯ ಕ್ಯಾಂಟೀನ್‌ನಲ್ಲಿ ಅಡುಗೆಗಾಗಿ ಬಳಸಲಾಗುತ್ತದೆ ಎಂದು ಪ್ರಧಾನಿ ಹೇಳಿದರು.