ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಮಾಡಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದು, ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸಬೇಡಿ ಎಂದು ದೆಹಲಿ ಜನರಿಗೆ ಸಂದೇಶ ರವಾನೆ ಮಾಡಿದ್ದಾರೆ.
ದಯವಿಟ್ಟು ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸಬೇಡಿ, ಇವುಗಳನ್ನ ಸಿಡಿಸುವುದರಿಂದ ನಿಮ್ಮ ಸ್ವಂತ ಕುಟುಂಬಕ್ಕೆ ತೊಂದರೆ ನೀಡುವುದರ ಜತೆಗೆ ಅವರ ಪ್ರಾಣದೊಂದಿಗೆ ನೀವೇ ಆಟವಾಡಿದ ರೀತಿಯಾಗಿರುತ್ತವೆ. ನವೆಂಬರ್ 14ರಂದು ಸಂಜೆ 7:49ರಿಂದ ದೆಹಲಿಯ 2 ಕೋಟಿ ನಾಗರಿಕರು ಲಕ್ಷ್ಮಿ ಪೂಜೆಯಲ್ಲಿ ಮನೆಯಿಂದ ಭಾಗಿಯಾಗಲಿದ್ದಾರೆ. ನಾನು ಕೂಡ ಪೂಜೆ ಆರಂಭ ಮಾಡಲಿದ್ದು, ಇದರ ನೇರ ಪ್ರಸಾರ ಟಿವಿಯಲ್ಲಿ ಇರಲಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿಯ 2 ಕೋಟಿ ಜನರು ಒಟ್ಟಿಗೆ ಸೇರಿ ಲಕ್ಷ್ಮಿ ಪೂಜೆ ಹಾಗೂ ದೀಪಾವಳಿ ಆಚರಣೆ ಮಾಡುವುದರಿಂದ ನಮಗಿರುವ ಕಷ್ಟಗಳೆಲ್ಲವೂ ದೂರ ಆಗಲಿವೆ ಎಂದಿದ್ದಾರೆ.