ನವದೆಹಲಿ: ಮಾಜಿ ಸಚಿವ ಹಾಗೂ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ, ಬಳ್ಳಾರಿಗೆ ಭೇಟಿ ನೀಡಿ ನಾಲ್ಕು ವಾರಗಳ ಕಾಲ ವಾಸ್ತವ್ಯ ಹೂಡಲು ಸುಪ್ರೀಂಕೋರ್ಟ್ನಲ್ಲಿ ಮನವಿ ಮಾಡಿಕೊಂಡಿದ್ದರು.
ಈ ಸಂಬಂಧ ವಿಚಾರಣೆ ನಡೆಸಿರುವ ಕೋರ್ಟ್, ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿ, ಸಾಕ್ಷಿಗಳು ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಪ್ರಾಸಿಕ್ಯೂಷನ್‌ಗೆ ಜೆ ಎಂಆರ್ ಶಾ ನೇತೃತ್ವದ ಪೀಠ ಸೂಚಿಸಿದೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮಗಳು ಮೂರು ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿರುವುದರಿಂದ ಪುತ್ರಿ ಮತ್ತು ಆಕೆಯ ನವಜಾತ ಶಿಶುವನ್ನು ಭೇಟಿ ಮಾಡುವ ಹಿನ್ನೆಲೆ ಬಳ್ಳಾರಿಗೆ ಭೇಟಿ ನೀಡಲು ಅವಕಾಶ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಕನಿಷ್ಠ ನಾಲ್ಕು ವಾರಗಳ ಕಾಲ ಬಳ್ಳಾರಿಗೆ ಭೇಟಿ ನೀಡಲು ತಮ್ಮ ಕಕ್ಷಿದಾರನಿಗೆ ಅವಕಾಶ ನೀಡುವಂತೆ ಅರ್ಜಿದಾರ ರೆಡ್ಡಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮೀನಾಕ್ಷಿ ಅರೋರಾ ಮನವಿ ಮಾಡಿದ್ದರು. ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಕೃಷ್ಣ ಮುರಾರಿ ನೇತೃತ್ವದ ಪೀಠವು ಸಿಬಿಐಗೆ ಜನಾರ್ದನ ರೆಡ್ಡಿ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಸೆಪ್ಟೆಂಬರ್ 30ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಈ ಮೊದಲು ಪೀಠ ಸೂಚಿಸಿತ್ತು. ಸಿಬಿಐ ವರದಿಯನ್ನು ಪರಿಶೀಲಿಸಿದ ನ್ಯಾಯಾಲಯ, ರೆಡ್ಡಿ ಅರ್ಜಿಯ ತೀರ್ಪನ್ನು ಪ್ರಕಟಿಸಿದೆ.
ಇದನ್ನೂ ಓದಿ: ಬಳ್ಳಾರಿ ಎಂಟ್ರಿಗೆ ಅನುಮತಿ ಕೋರಿದ ಜನಾರ್ದನ ರೆಡ್ಡಿ: ಸುಪ್ರೀಂನಲ್ಲಿಂದು ವಿಚಾರಣೆ
2009ರಲ್ಲಿ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಿಬಿಐ ಗಾಲಿ ಜನಾರ್ದನ ರೆಡ್ಡಿ ಹಾಗೂ ಇತರೆ 9 ಮಂದಿ ವಿರುದ್ಧ ಕೇಸ್ ದಾಖಲಿಸಿತ್ತು. ಸೆಪ್ಟೆಂಬರ್ 5, 2011ರಂದು ಜನಾರ್ದನ ರೆಡ್ಡಿ ಬಂಧನವಾಗಿತ್ತು. ಬಳಿಕ ಸಾಕ್ಷ್ಯ ನಾಶ ಮಾಡುವ ಶಂಕೆ ಮೇಲೆ ಕರ್ನಾಟಕದ ಬಳ್ಳಾರಿ, ಕಡಪ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಿಗೆ ಭೇಟಿ ನೀಡುವಂತಿಲ್ಲ ಎಂಬ ಷರತ್ತಿನೊಂದಿಗೆ ಸುಪ್ರೀಂ ಕೋರ್ಟ್ ಜನವರಿ 20, 2015ರಂದು ಅವರಿಗೆ ಜಾಮೀನು ನೀಡಿತ್ತು. ಆದ್ದರಿಂದ ಬಳ್ಳಾರಿಗೆ ಭೇಟಿ ನೀಡುವ ಮೊದಲು ಜನಾರ್ದನ ರೆಡ್ಡಿ ಸುಪ್ರೀಂ ಕೋರ್ಟ್ ಅನುಮತಿ ಪಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.