ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಬಿನ್ನರ್ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಹತ್ಯೆಗೀಡಾದ ಉಗ್ರನನ್ನು ಬಾರಾಮುಲ್ಲಾದ ಪಟ್ಟಾನ್‌ನ ಇರ್ಷಾದ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಈತ ಏಪ್ರಿಲ್ 2022 ರಿಂದ ಲಷ್ಕರ್-ಎ-ತೊಯ್ಬಾ ಜತೆ ಸಂಪರ್ಕ ಹೊಂದಿದ್ದ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
1 ಎಕೆ 47 ರೈಫಲ್, 2 ಮ್ಯಾಗಜೀನ್‌ಗಳು ಮತ್ತು ಮದ್ದುಗುಂಡು ಸೇರಿ ಇತರೆ ವಿಧ್ವಂಸಕ ಸಾಮಗ್ರಿಗಳನ್ನು ಉಗ್ರನಿಂದ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಒಂದು ಶ್ವಾನ ಪ್ರಾಣ ಕಳೆದುಕೊಂಡಿದೆ. ಭದ್ರತಾ ಪಡೆಯ ಮೂವರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇಬ್ಬರು ಹೈಬ್ರಿಡ್ ಭಯೋತ್ಪಾದಕರ ಬಂಧನ: ಸೋಪೋರ್ನಲ್ಲಿ ಇಬ್ಬರು ಹೈಬ್ರಿಡ್ ಭಯೋತ್ಪಾದಕರನ್ನು ಸೇನೆ ಮತ್ತು ಕೇಂದ್ರಾಡಳಿತ ಪ್ರದೇಶದ ಪೊಲೀಸರು ಜಂಟಿಯಾಗಿ ಶೋಧ ನಡೆಸಿ ಭಾನುವಾರ ಬಂಧಿಸಿದ್ದಾರೆ. ತಾರಿಕ್ ಅಹ್ಮದ್ ವಾನಿ ಮತ್ತು ಇಶ್ಫಾಕ್ ಅಹ್ಮದ್ ವಾನಿ ಬಂಧಿತರು.
ಭಯೋತ್ಪಾದಕರ ಚಲನವಲನದ ಬಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ದಂಗಿವಾಚಾ ವ್ಯಾಪ್ತಿಯ ಹಡಿಪೋರಾ ರಫಿಯಾಬಾದ್‌ನಲ್ಲಿ ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಲೋರಿಹಾಮಾ ಲಿಂಕ್ ರಸ್ತೆಯಿಂದ ಹಡ್ಡಿಪೋರಾ ಕಡೆಗೆ ಬರುತ್ತಿದ್ದ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ತಡೆದಾಗ ಅವರು ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಅವರನ್ನು ಬೆನ್ನಟ್ಟಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 2 ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು ಮತ್ತು 11 ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಎಲ್ಇಟಿಯ ಹೈಬ್ರಿಡ್ ಭಯೋತ್ಪಾದಕರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಬಾರಾಮುಲ್ಲಾದಲ್ಲಿ ಬೆಳ್ಳಂಬೆಳಗ್ಗೆಯೇ ಗುಂಡಿನ ಮೊರೆತ..ಎನ್ಕೌಂಟರ್ಗೆ ಉಗ್ರ ಬಲಿ