ಸೂರತ್(ಗುಜರಾತ್): ದೇಶಾದ್ಯಂತ ಗೌರಿ ಗಣೇಶ ಹಬ್ಬಕ್ಕೆ ದಿನಗಣನೆ ಆರಂಭಗೊಂಡಿದೆ. ಮನೆಯಲ್ಲಿ ಮಾತ್ರವಲ್ಲದೇ ವಿವಿಧ ಗಲ್ಲಿ, ಸಾರ್ವಜನಿಕ ಸ್ಥಳಗಳಲ್ಲೂ ಗಣಪತಿ ಮೂರ್ತಿಗಳನ್ನು ಕೂರಿಸಲಾಗುತ್ತದೆ. ಪ್ರಮುಖವಾಗಿ ಗುಜರಾತ್ನಾದ್ಯಂತ ವಿಶಿಷ್ಟ ನಂಬಿಕೆವೊಂದಿಗೆ ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಈ ಬಾರಿ ಸ್ವಲ್ಪ ವಿಭಿನ್ನವಾಗಿ ಆಚರಣೆ ಮಾಡಲು ಸೂರತ್ ಮುನ್ಸಿಪಲ್ ಕಾರ್ಪೋರೇಷನ್ ಮುಂದಾಗಿದೆ.
ಸಾರ್ವಜನಿಕವಾಗಿ ಕೂರಿಸುವ ಗಣೇಶನ ಸ್ಥಳಗಳಲ್ಲಿ ಅನ್ನ ಪ್ರಸಾದ ಕಾರ್ಯಕ್ರಮ ಜರುಗುತ್ತದೆ. ಆದರೆ, ಈ ಸಲ ಪ್ರಸಾದದ ಜೊತೆಗೆ ಕೋವಿಡ್ ಬೂಸ್ಟರ್ ಡೋಸ್ ನೀಡಲು ಸೂರತ್ ಮುನ್ಸಿಪಲ್ ಸಜ್ಜಾಗಿದೆ. ಆರೋಗ್ಯದ ದೃಷ್ಟಿಯಿಂದ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಈ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಕೂರಿಸುವ ಸ್ಥಳಗಳಿಗೆ ಹೋಗಿ, ಕೋವಿಡ್ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಿದೆ. ರಾಜ್ಯದ ಬಹುತೇಕ ಜನರು ಕೋವಿಡ್ನ ಮೂರನೇ ಡೋಸ್ ಪಡೆದುಕೊಂಡಿಲ್ಲ. ಹೀಗಾಗಿ, ಆಡಳಿತ ಮಂಡಳಿ ಈ ವಿಭಿನ್ನ ಕೆಲಸಕ್ಕೆ ಕೈಹಾಕಿದೆ. ಆಗಸ್ಟ್ 31ರಿಂದ ಈ ಯೋಜನೆ ಆರಂಭಗೊಳ್ಳಲಿದೆ.
ಇದನ್ನೂ ಓದಿ: ಗಣೇಶನ ಅವತಾರ ಎತ್ತಿದ ಪುನೀತ್ ರಾಜಕುಮಾರ್: ಅಪ್ಪು ಗಣೇಶ ಮೂರ್ತಿಗಳಿಗೆ ಭಾರಿ ಬೇಡಿಕೆ
ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಕೂರಿಸುವ ಸಂಘಟಕರೊಂದಿಗೆ ಈಗಾಗಲೇ ಸೂರತ್ ಮುನ್ಸಿಪಲ್ ಕಾರ್ಪೋರೇಷನ್ ವಿಶೇಷ ಸಭೆ ಸಹ ನಡೆಸಿದ್ದು, ಅಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಕೋವಿಡ್ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ವೈದ್ಯಕೀಯ ತಂಡ ಸಹ ಸಜ್ಜುಗೊಂಡಿದೆ.
ಸೂರತ್ನಲ್ಲಿ ಇಲ್ಲಿಯವರೆಗೆ ಶೇ. 65ರಷ್ಟು ಜನರಿಗೆ ಕೋವಿಡ್ ಬೂಸ್ಟರ್ ಡೋಸ್ ನೀಡಲಾಗಿದೆ. ಉಳಿದ ಜನರಿಗೂ ಲಸಿಕೆ ನೀಡುವ ಉದ್ದೇಶದಿಂದ ಈ ವಿನೂತನ ಕ್ರಮಕ್ಕೆ ಮುಂದಾಗಿದೆ. ವಿಶೇಷವೆಂದರೆ ಸಾರ್ವಜನಿಕ ಗಣೇಶನ ವೀಕ್ಷಣೆ ಮಾಡಲು ಹೆಚ್ಚಿನ ಜನರು ಸೂರತ್ನ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ.