ಹೈದರಾಬಾದ್(ತೆಲಂಗಾಣ): ದೇಶಾದ್ಯಂತ ದಕ್ಷಿಣ ಆಫ್ರಿಕಾದ ರೂಪಾಂತರ ಸೋಂಕು ಒಮಿಕ್ರಾನ್ ಭಯ ಶುರುವಾಗಿದ್ದು, ಇದರ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ಹೊಸ ಹೊಸ ಮಾರ್ಗಸೂಚಿ ಜಾರಿಗೊಳಿಸುತ್ತಿವೆ. ಆ ಸಾಲಿಗೆ ಇದೀಗ ತೆಲಂಗಾಣ ಸಹ ಸೇರಿಕೊಂಡಿದೆ.
ಒಮಿಕ್ರಾನ್ ಭಯದಲ್ಲೇ ತೆಲಂಗಾಣ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಜಾರಿಗೊಳಿಸಿದ್ದು, ಮಾಸ್ಕ್ ಹಾಕಿಕೊಳ್ಳದಿದ್ದರೆ ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ರಾಜ್ಯ ಆರೋಗ್ಯ ಸಚಿವ ಹರೀಶ್ ರಾವ್, ಹೊಸ ಸೋಂಕು ಭಾರತಕ್ಕೆ ಈಗಾಗಲೇ ಪ್ರವೇಶ ಮಾಡಿದ್ದು, ಅದರ ಬಗ್ಗೆ ನಾವೆಲ್ಲರೂ ಎಚ್ಚರದಿಂದ ಇರಬೇಕು ಎಂದರು.
ಆರೋಗ್ಯ ಸಚಿವರು ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾರ್ಗಸೂಚಿ ಪ್ರಕಟಿಸಿದ್ದು, ರಾಜ್ಯದಲ್ಲಿ ಮಾಸ್ಕ್ ಹಾಕಿಕೊಳ್ಳದಿದ್ದರೆ ದೊಡ್ಡ ಮೊತ್ತ ತೆರಬೇಕಾಗುತ್ತದೆ ಎಂದರು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಇಲಾಖೆಗೆ ಸೂಚನೆ ಸಹ ನೀಡಲಾಗಿದೆ ಎಂದರು.
ಇದನ್ನೂ ಓದಿರಿ: ವಿದೇಶದಿಂದ ಬಂದ 12 ಜನರಲ್ಲಿ ಕೊರೊನಾ.. ಒಮಿಕ್ರಾನ್ ಪರೀಕ್ಷೆಗೆ ಸ್ಯಾಂಪಲ್ಸ್ ರವಾನಿಸಿದ ತೆಲಂಗಾಣ
ಲಸಿಕೆ ಹಾಕಿಸಿಕೊಳ್ಳುವ ವಿಚಾರವಾಗಿ ರಾಜ್ಯದಲ್ಲಿ ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಲಾಗುವುದು ಎಂದಿರುವ ರಾವ್, ಹೋಟೆಲ್, ರೆಸ್ಟೋರೆಂಟ್ ಮತ್ತು ಪಾರ್ಕ್ಗಳಿಗೆ ಹೋಗಲು ಲಸಿಕೆ ಪಡೆದುಕೊಂಡಿರುವ ಪ್ರಮಾಣಪತ್ರ ಕಡ್ಡಾಯವಾಗಿದೆ ಎಂದು ತಿಳಿಸಿದರು.
ತೆಲಂಗಾಣದಲ್ಲೂ ಕೋವಿಡ್ ಹೊಸ ರೂಪಾಂತರ ಹರಡುವಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಚಿವರು, ಸೋಂಕು ಹರಡುವುದನ್ನ ತಪ್ಪಿಸಲು ರಾಜ್ಯ ಆರೋಗ್ಯ ಇಲಾಖೆ ಹೆಚ್ಚಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಜೊತೆಗೆ ನಾವು ಒಮಿಕ್ರಾನ್ ಎದುರಿಸಲು ಸಿದ್ಧರಿದ್ದೇವೆ. ಇದಕ್ಕೆ ಜನರು ಮಾಸ್ಕ್ ಹಾಕಿಕೊಳ್ಳುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.
18 ವರ್ಷ ಮೇಲ್ಪಟ್ಟ ಎಲ್ಲರೂ ಕೊರೊನಾ ಲಸಿಕೆ ಪಡೆದುಕೊಳ್ಳುವಂತೆ ಸಲಹೆ ನೀಡಿರುವ ಸಚಿವರು, ಒಮಿಕ್ರಾನ್ ತಡೆಗೆ ರಾಜ್ಯದಲ್ಲಿ ಈಗಾಗಲೇ 27,000 ಹಾಸಿಗೆ ಸಿದ್ಧಪಡಿಸಲಾಗಿದೆ ಎಂದರು. ಕಳೆದ ಜುಲೈ ತಿಂಗಳಿಂದ ಜನರು ಕೋವಿಡ್ ಮಾರ್ಗಸೂಚಿ ಮರೆತು ಜನಜೀವನ ನಡೆಸಲು ಶುರು ಮಾಡಿದ್ದರಿಂದ ಕಳೆದ ಎರಡು ವಾರಗಳಲ್ಲಿ ಸೋಂಕಿತ ಪ್ರಕರಣ ಹೆಚ್ಚಾಗಿ ಕಾಣಿಸಿಕೊಂಡಿವೆ ಎಂದು ತಿಳಿಸಿದರು.