ಕಟಕ್ : ಜೂನ್ 2 ರಂದು ಬಾಲಸೋರ್‌ನ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ಅಪಘಾತ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಈ ವೇಳೆ ಗಾಯಗೊಂಡು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬರು ಇದೀಗ ಸಾವನ್ನಪ್ಪಿದ್ದಾರೆ. ಎಸ್‌ಸಿಬಿಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಗಾಯಾಳುಗಳ ಪೈಕಿ ಮೃತಪಟ್ಟಿರುವ ಎರಡನೇ ಕೇಸ್ ಇದಾಗಿದೆ.
ಮೃತರನ್ನು ಬಿಹಾರ ಮೂಲದ ಪ್ರಕಾಶ್ ರಾಮ್ ಎಂದು ಗುರುತಿಸಲಾಗಿದೆ. ರೈಲು ದುರಂತದ ಬಳಿಕ ಪ್ರಕಾಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಎಸ್‌ಸಿಬಿಯ ಐಸಿಯುಗೆ ದಾಖಲಿಸಲಾಗಿತ್ತು. ಇಂದು ಎಸ್‌ಸಿಬಿ ಅಧಿಕಾರಿಗಳು ಅವರ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಬಹನಾಗಾ ರೈಲು ದುರಂತದಲ್ಲಿ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 290 ಕ್ಕೆ ಏರಿಕೆಯಾಗಿದೆ. ಈ ಹಿಂದೆ ವಿಜಯ್ ಪಾಸ್ವಾನ್ ಎಂಬ ಇನ್ನೊಬ್ಬ ಗಾಯಾಳು ಎಸ್‌ಸಿಬಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ : Odisha Rail Mishap Video: ಒಡಿಶಾ ಭೀಕರ ರೈಲು ದುರಂತಕ್ಕೂ ಮುನ್ನ ಸೆರೆಯಾದ ವಿಡಿಯೋ
ಬಹನಾಗಾ ಬಜಾರ್ ನಿಲ್ದಾಣದ ಬಳಿ ಶಾಲಿಮಾರ್ - ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಪಕ್ಕದಲ್ಲಿ ನಿಂತಿದ್ದ ಸರಕು ಸಾಗಾಣಿಕ ರೈಲಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಹಳಿತಪ್ಪಿದ ಸರಕು ರೈಲಿನ ಬೋಗಿಗಳು ಪಕ್ಕದ ಟ್ರಾಕ್ಗೆ ಬಿದ್ದಿದ್ದವು. ಈ ವೇಳೆ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಹೌರಾ ಎಕ್ಸ್‌ಪ್ರೆಸ್ ಸಹ ಹಳಿ ತಪ್ಪಿದ್ದು, ಸುಮಾರು 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು, ಸಾವಿನ ಸಂಖ್ಯೆ 288 ಎಂದು ರೈಲ್ವೆ ಇಲಾಖೆ ತಿಳಿಸಲಾಗಿತ್ತು. ಬಳಿಕ 288 ಜನ ಸಾವನ್ನಪ್ಪಿಲ್ಲ, 275 ಮಂದಿ ಮೃತಪಟ್ಟಿದ್ದಾರೆಂದು ಒಡಿಶಾ ಸರ್ಕಾರ ಮಾಹಿತಿ ನೀಡಿತ್ತು. ಇದೀಗ ಮೃತರ ಸಂಖ್ಯೆ 290ಕ್ಕೆ ಏರಿಕೆಯಾಗಿದೆ. ಈ ಅಪಘಾತವು ಭಾರತೀಯ ರೈಲ್ವೆಯ ಇತಿಹಾಸದಲ್ಲೇ ನಾಲ್ಕನೇ ದೊಡ್ಡ ಅತಿ ದೊಡ್ಡ ಸಾವು -ನೋವಿಗೆ ಕಾರಣವಾದ ಪ್ರಕರಣವಾಗಿದೆ.
ಇದನ್ನೂ ಓದಿ : ಒಡಿಶಾ ರೈಲು ಅಪಘಾತ: 40 ಜನರು ವಿದ್ಯುತ್ ಶಾಕ್ನಿಂದಲೇ ಮೃತಪಟ್ಟಿರುವುದು ಬೆಳಕಿಗೆ!
ರೈಲು ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ತಂಡವು ಬಹನಾಗಾ ರೈಲ್ವೆ ನಿಲ್ದಾಣದ ಸಿಬ್ಬಂದಿಯನ್ನ ಈಗಾಗಲೇ ವಿಚಾರಣೆ ನಡೆಸುವ ಮೂಲಕ ತನಿಖೆ ಚುರುಕುಗೊಳಿಸಿದೆ. ಇನ್ನೊಂದೆಡೆ, ಈ ರೈಲು ದುರಂತವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ದೇಶದಲ್ಲಿ ರೈಲುಗಳ ಸುರಕ್ಷತಾ ಕಾರ್ಯವಿಧಾನದ ಮೇಲೆ ವಿರೋಧ ಪಕ್ಷಗಳು ಶಂಕೆ ವ್ಯಕ್ತಪಡಿಸಿವೆ. ಪ್ರಯಾಣಿಕರ ರೈಲ್ವೆ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿವೆ.
ಇದನ್ನೂ ಓದಿ : ರೈಲು ದುರಂತದಲ್ಲಿ ಮೃತರ ಸಂಖ್ಯೆ 288 ಅಲ್ಲ, 275.. ಗಾಯಗೊಂಡವರು 1,175 ಮಂದಿ : ಒಡಿಶಾ ಸರ್ಕಾರ