ಭುವನೇಶ್ವರ: ಸುಳ್ಳು ಪ್ರಮಾಣಪತ್ರವನ್ನು ಸಲ್ಲಿಸಿ ಬರೋಬ್ಬರಿ 12 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಯನ್ನು ಫೆಬ್ರವರಿ 15 ರಂದು ಕೆಲಸದಿಂದ ವಜಾ ಮಾಡಲಾಗಿದ್ದು, ಆರೋಪಿಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.
ಪ್ರಸನ್ನ ಬೆಹೆರಾ ಬಂಧಿತ ಆರೋಪಿ. ಈತ ತಮ್ಮ ಅಣ್ಣನ ಪ್ರಮಾಣ ಪತ್ರವನ್ನು ಸಲ್ಲಿಸಿ, ಹನ್ನೆರಡು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾನೆ. ಈ ಕುರಿತು ಸಮಗ್ರ ತನಿಖೆ ನಡೆಸಿದ ನಂತರ 120 ಬೆಟಾಲಿಯನ್ ಅಧಿಕಾರಿಗಳು ಕಳೆದ ಫೆ.15 ರಂದು ಅವರನ್ನು ಕೆಲಸದಿಂದ ತೆಗೆದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಪ್ರಸನ್ನ ಬೆಹೆರಾ ಅವರ ಹಿರಿಯ ಸಹೋದರ ಪ್ರದ್ಯುಮ್ನಾಗೆ ಅರ್ಹ ವಯಸ್ಸಿನ ಮಿತಿ ಮೀರಿದ ಹಿನ್ನೆಲೆ 2000 ರಲ್ಲಿ ತಮ್ಮ ಸಹೋದರನ ಹೆಸರಿನಲ್ಲಿ ಸೈನ್ಯಕ್ಕೆ ಸೇರಿದ್ದಾನೆ ಎಂದು ತಿಳಿದುಬಂದಿದೆ.
ಪ್ರದ್ಯುಮ್ನಾ ಅವರ ಮೊದಲ ಹೆಂಡತಿ ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು 2018 ರಲ್ಲಿ ಪ್ರದ್ಯುಮ್ನಾನನ್ನು ಬಂಧಿಸಿ, ಧೆಂಕನಲ್ ಜಿಲ್ಲಾ ಜೈಲಿಗೆ ಕಳುಹಿಸಿದ್ದರು. ಜೊತೆಗೆ ಕಿರಿಯ ಸಹೋದರ ಪ್ರಸನ್ನ ಬೆಹೆರಾ ಕುರಿತು ತನಿಖೆ ನಡೆಸುವಂತೆ ಪ್ರದ್ಯುಮ್ನಾ ಪತ್ನಿ ಪತ್ರ ಬರೆದಿದ್ದರು.
ಈ ಕುರಿತು ವಿಚಾರಣೆ ನಡೆಸಿದಾಗ ತನ್ನ ಅಣ್ಣನಿಂದ ಸಲಹೆ-ಸೂಚನೆಗಳನ್ನು ಪಡೆದು, ಸಹೋದರನ ಪ್ರಮಾಣಪತ್ರವನ್ನು ನೀಡಿ 2009 ರಲ್ಲಿ 120ನೇ ಬೆಟಾಲಿಯನ್‌ಗೆ ಸೇರಿದ್ದಾನೆ ಎಂದು ಗೊತ್ತಾಗಿದೆ. ಈ ಸಂಬಂಧ ಖಾರ್ವೆಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಸನ್ನ ಬೆಹೆರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.