ಸೇಲಂ, ತಮಿಳುನಾಡು : ವಿಧಾನಸಭಾ ಚುನಾವಣೆ ತಮಿಳುನಾಡಿನಲ್ಲಿ ರಂಗೇರಿವೆ. ಎಲ್ಲೆಡೆ ಪಕ್ಷಗಳು ಅದ್ದೂರಿ ಮತ ಪ್ರಚಾರ ಕೈಗೊಂಡಿದ್ದು, ಮತದಾರರನ್ನು ಓಲೈಸಲು ಕಸರತ್ತು ನಡೆಸುತ್ತಿವೆ.
ಇದರ ಬೆನ್ನಲ್ಲೇ ಸೇಲಂ ಜಿಲ್ಲೆಯ ಹಲವು ಕಬ್ಬಿಣದ ಅದಿರು ಉತ್ಪಾದನೆ ಮಾಡುವ ಗಣಿಗಳ ಕಾರ್ಮಿಕರು ಈ ಬಾರಿಯ ವಿಧಾನಸಭಾ ಚುನಾವಣೆಗೆ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ.
ಮತದಾನ ಮಾಡಲು ವಿರೋಧವೇಕೆ?: ಸೇಲಂನ ಹಲವು ಪ್ರದೇಶಗಳಲ್ಲಿ ಮ್ಯಾಗ್ನಾಸೈಟ್ ಎಂಬ ಕಬ್ಬಿಣದ ಅದಿರನ್ನು ಉತ್ಪಾದನೆ ಮಾಡುವ ಗಣಿಗಳಿವೆ. ಕಳೆದ ಐದು ವರ್ಷಗಳಿಂದ ಗಣಿಗಳನ್ನು ಮುಚ್ಚಲಾಗಿದೆ. ಪರಿಸರದ ಮೇಲೆ ಈ ಕಬ್ಬಿಣದ ಗಣಿಗಾರಿಕೆಯಿಂದ ದುಷ್ಪರಿಣಾಮಗಳಿವೆ ಎಂಬ ಆರೋಪದ ಮೇಲೆ ಗಣಿಗಳನ್ನು ಮುಚ್ಚಲಾಗಿದೆ.
ಇದನ್ನೂ ಓದಿ: ಚಲಿಸುವ ಕಾರುಗಳು ಆಕಸ್ಮಿಕವಾಗಿ ಧಗಧಗಿಸೋದ್ಯಾಕೆ?
ಸುಮಾರು ಎರಡು ತಿಂಗಳಿನಿಂದ ಗಣಿಗಳನ್ನು ತೆರೆಯಲು ಅಲ್ಲಿನ ಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ. ಸುಮಾರು 50 ವರ್ಷಗಳಿಂದ ಸಾವಿರಾರು ಕಾರ್ಮಿಕರಿಗೆ ಜೀವನೋಪಾಯವಾಗಿದ್ದ ಈ ಗಣಿಗಳನ್ನು ಮುಚ್ಚಿರುವುದರಿಂದ ಅಲ್ಲಿನ ಜನರಿಗೆ ಬೇರೆ ದಾರಿ ಕಾಣದಾಗಿದೆ. ಇದರಿಂದಾಗಿ ಗಣಿ ಕಂಪನಿಗಳ ಗೇಟ್ಗಳ ಬಳಿ ಕಾರ್ಮಿಕರು ಪ್ರತಿಭಟಿಸುತ್ತಿದ್ದಾರೆ.
ಸೇಲಂ ಗಣಿಗಳ ಬಗ್ಗೆ ಮತ್ತೊಂದಿಷ್ಟು : ಸೇಲಂನಲ್ಲಿ ಸುಮಾರು 3 ಸಾವಿರ ಎಕರೆ ಪ್ರದೇಶಗಳಲ್ಲಿ ಗಣಿಗಳಿವೆ. ಇಲ್ಲಿನ ಬಿಳಿ ಕಲ್ಲುಗಳೂ ಕೂಡ ಸಿಗುತ್ತಿದ್ದವು. ಇವುಗಳನ್ನು ಪುಡಿ ಮಾಡಿ, ಸ್ಲ್ಯಾಬ್ಗಳನ್ನಾಗಿ ಮಾಡಿ ರಫ್ತು ಮಾಡಲಾಗುತ್ತಿತ್ತು. ಸೇಲಂ ಜಿಲ್ಲೆಯ ಕರುಪ್ಪು, ಸೆಂಗಾರ್ಡು, ದಾಲ್ಮಿಯಾಬೋರ್ಡ್, ಮಾಮನ್ಗಂ, ವೆಲ್ಲಾಲ್ಪಟ್ಟಿ ಸೇರಿ ಸುಮಾರು 20 ಗ್ರಾಮಗಳ ಜನರಿಗೆ 1971ರಿಂದ ಈ ಗಣಿಗಳೇ ಜೀವನೋಪಾಯಕ್ಕೆ ಆಧಾರವಾಗಿದ್ದವು.
ಇದನ್ನೂ ಓದಿ: ಭಾರತದ ಬಗ್ಗೆ ಅಮೆರಿಕ ಸೈಲೆಂಟಾಗಿದೆ, 'ನನಗೆ ಆರ್ಥಿಕ ಸಮಾನತೆ ಬೇಕು'- ರಾಹುಲ್ ಗಾಂಧಿ
ಕೇಂದ್ರ ಪರಿಸರ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 2016ರಲ್ಲಿ ಈ ಗಣಿಗಳನ್ನು ಮುಚ್ಚಲಾಯಿತು. ಅದರಲ್ಲೂ ಸೇಲ್ ರಿಫ್ರಾಕ್ಟರಿ ಕಂಪನಿ, ದಾಲ್ಮಿಯಾ ಮ್ಯಾಗ್ನಾಸೈಟ್, ತಮಿಳುನಾಡು ಮ್ಯಾಗ್ನಾಸೈಟ್ ಮುಂತಾದ ಕಂಪನಿಗಳು ಕಾರ್ಮಿಕ ವಿರೋಧಿ ನೀತಿ ಮತ್ತು ಇತರ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆ ಸುಮಾರು 5 ವರ್ಷಗಳಿಂದ ಗಣಿ ಕಂಪನಿಗಳನ್ನು ಮುಚ್ಚಲಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಸುಮಾರು ಎರಡು ತಿಂಗಳಿಂದ ಗಣಿ ಕಂಪನಿಗಳ ಪುನಾರಂಭಕ್ಕೆ ಧರಣಿಗಳನ್ನು ನಡೆಸುತ್ತಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.