ನರ್ಮದಾ(ಗುಜರಾತ್): 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದಾಗಿನಿಂದ ಈವರೆಗೆ ದೊಡ್ಡ ಮಟ್ಟದ ಉಗ್ರರ ದಾಳಿಗಳು ನಡೆದಿಲ್ಲ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರವನ್ನು ಕಂಡರೆ ಭಯೋತ್ಪಾದಕರಿಗೆ ಭಯವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಗುಜರಾತ್ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಣಿಯ 2ನೇ ದಿನದ ಸಭೆಯಲ್ಲಿ ಮಾತನಾಡಿದ ಅವರು, 40 ವರ್ಷಗಳಿಂದ ಸಮಸ್ಯೆಯನ್ನು ಬಗೆಹರಿಸದ ಕಾಂಗ್ರೆಸ್, ಒಂದು ಶ್ರೇಣಿ-ಒಂದು ಪಿಂಚಣಿ(ಒಆರ್‌ಒಪಿ) ವಿಷಯದಲ್ಲಿ ನಮ್ಮ ಪಕ್ಷ ಗಂಭೀರವಾಗಿಲ್ಲ ಎಂದು ದೂಷಿಸುತ್ತಿದೆ. ಒಂದು ವೇಳೆ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಸೈನಿಕರ ಬಗ್ಗೆ ಕಾಳಜಿ ಇದ್ದಿದ್ದರೆ 40 ವರ್ಷಗಳಿಂದ ಒಂದು ಶ್ರೇಣಿ-ಒಂದು ಪಿಂಚಣಿಗಾಗಿ ಬೇಡುವಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಅವರು ಏನೇ ಹೇಳಿಕೊಂಡರೂ ನಾವು ಭಯೋತ್ಪಾದಕರನ್ನು ಯಶಸ್ವಿಯಾಗಲು ಬಿಡುವುದಿಲ್ಲ. ಜಮ್ಮು ಮತ್ತು ಕಾಶ್ಮೀರ ಅಷ್ಟೇ ಅಲ್ಲ, ಮೋದಿ ಅವರು ಬಂದ ನಂತರ ದೇಶದ ಯಾವುದೇ ಭಾಗದಲ್ಲಿ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿ ನಡೆದಿಲ್ಲ. ಇದು ಸಾಮಾನ್ಯ ವಿಷಯವಲ್ಲ ಎಂದಿದ್ದಾರೆ.
ಭಯೋತ್ಪಾದಕರು ತಮ್ಮ ಸುರಕ್ಷಿತ ಸ್ಥಳಗಳಲ್ಲಿಯೂ ತಾವು ಸುರಕ್ಷಿತವಾಗಿಲ್ಲ ಎಂದು ಈಗ ಅರಿತುಕೊಂಡಿದ್ದಾರೆ. ಉರಿ ದಾಳಿಯ ನಂತರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ಮೂಲಕ ಉಗ್ರರನ್ನು ಕೊಲ್ಲಬಹುದು. ಅಗತ್ಯಬಿದ್ದಲ್ಲಿ ಗಡಿದಾಟಿ ಹೋಗಿ ಭಯೋತ್ಪಾದಕರನ್ನು ಹೊಡೆಯಬಹುದು ಎಂಬ ಸ್ಪಷ್ಟ ಸಂದೇಶವನ್ನು ವಿಶ್ವಕ್ಕೆ ನೀಡಿದ್ದೆವು ಎಂದು ಸಿಂಗ್ ಹೇಳಿದರು.