ಬೆಳಗಾವಿ/ನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ 10 ಕೋಟಿ ರೂಪಾಯಿ ಸುಲಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರ ತಂಡ ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ಬೀಡುಬಿಟ್ಟಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕೈದಿ ಬಳಿ ಎರಡು ಮೊಬೈಲ್ ಮತ್ತು ಎರಡು ಸಿಮ್ ಕಾರ್ಡ್ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ನಾಗ್ಪುರ ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಸಾಕ್ಷ್ಯ ದೃಷ್ಟಿಯಿಂದ ಇದು ಮಹತ್ವದ ಬೆಳವಣಿಗೆಯಾಗಿದ್ದು, ಆರೋಪಿಯನ್ನು ನಾಗ್ಪುರಕ್ಕೆ ಸ್ಥಳಾಂತರ ಮಾಡುವ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ಮಂಗಳವಾರ ಬೆಳಗ್ಗೆ ನಾಗ್ಪುರದ ಖಮ್ಲಾದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಮೂರು ಬೆದರಿಕೆ ಕರೆಗಳು ಬಂದಿದ್ದವು. ಜಯೇಶ್ ಕಾಂತ ಅಲಿಯಾಸ್ ಜಯೇಶ್ ಪೂಜಾರಿ ಹೆಸರಿನಲ್ಲಿ ಈ ಬೆದರಿಕೆ ಕರೆಗಳನ್ನು ಮಾಡಿ 10 ಕೋಟಿ ರೂ. ನೀಡುವಂತೆ ಬೆದರಿಸಿದ್ದರು. ಈ ಬೆದರಿಕೆ ಕರೆಗಳ ಜಾಡು ಹಿಡಿದು ನಾಗ್ಪುರ ಪೊಲೀಸರು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕಳೆದ ಎರಡು ದಿನಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಕರೆಗಳು ಬೆಂಗಳೂರು ಮೂಲದ ಯುವತಿಯ ಮೊಬೈಲ್ ಫೋನ್ನಿಂದ ಬಂದಿರುವುದು ಪತ್ತೆಯಾಗಿದೆ. ಆದರೆ, ಈ ಕರೆಗಳನ್ನು ಯುವತಿ ಮಾಡಲ್ಲ. ಆಕೆಯ ಸ್ನೇಹಿತನಾದ ಜಯೇಶ್ ಕಾಂತ ಮಾಡಿದ್ದು, ಈತ ಹಿಂಡಲಗಾ ಜೈಲಿನಲ್ಲಿ ಬಂಧಿಯಾಗಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮಹಾರಾಷ್ಟ್ರದಿಂದ ಬೆಳಗಾವಿಗೆ ಆಗಮಿಸಿ ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ.
ಇದರ ನಡುವೆ ನಾಗ್ಪುರ ಪೊಲೀಸರಿಗೆ ಎರಡು ಮೊಬೈಲ್ಗಳು ಮತ್ತು ಎರಡು ಸಿಮ್ ಕಾರ್ಡ್ ಸಿಕ್ಕಿದೆ. ಇದೇ ಸಿಮ್ ಕಾರ್ಡ್ಗಳನ್ನು ಬಳಸಿ ಗಡ್ಕರಿ ಕಚೇರಿಗೆ ಕೈದಿ ಜಯೇಶ್ ಕಾಂತ ಸುಲಿಗೆ ಕರೆಗಳನ್ನು ಮಾಡುತ್ತಿದ್ದರು. ಸಾಕ್ಷ್ಯ ಸಂಗ್ರಹ ದೃಷ್ಟಿಯಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಆರೋಪಿಯನ್ನು ನಾಗ್ಪುರಕ್ಕೆ ಸ್ಥಳಾಂತರ ಮಾಡುವ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ನಾಗ್ಪುರ ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.
ಜಯೇಶ್ ಕಾಂತ ಯಾರು?: ನಾಗ್ಪುರ ನಗರದ ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಹಾಕಿರುವ ಪ್ರಕರಣ ದಾಖಲಾಗಿದೆ. ಈ ಬೆದರಿಕೆ ಹಾಕಿರುವ ಆರೋಪಿ ಜಯೇಶ್ ಕಾಂತ ಕುಖ್ಯಾತ ದರೋಡೆಕೋರನಾಗಿದ್ದಾನೆ. ಸದ್ಯ ಬೆಳಗಾವಿ ಜೈಲಿನಲ್ಲಿ ಬಂಧಿಯಾಗಿರುವ ಈತನಿಗೆ 2016ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಅಲ್ಲದೇ, ಜಯೇಶ್ ಕಾಂತ ಜೈಲಿನಿಂದ ಪರಾರಿಯಾಗಿರುವ ಪ್ರಕರಣ ಕೂಡ ಇದ್ದು, ಸುಲಿಗೆ ಸಂಬಂಧ ಬೆದರಿಕೆ ಕರೆ ಮಾಡಿರುವ ಬಗ್ಗೆ ಹಳೆಯ ದಾಖಲೆಗಳು ಲಭ್ಯವಾಗಿದೆ. ಈ ಮೊದಲು ಎಂದರೆ ಜನವರಿ 14ರಂದು ಕೂಡ ಹಣಕ್ಕಾಗಿ ಬೇಡಿಕೆ ಇಟ್ಟು ನಿತಿನ್ ಗಡ್ಕರಿ ಅವರಿಗೆ ಕರೆಗಳನ್ನು ಮಾಡಲಾಗಿತ್ತು. ಆಗಲೇ ಮಹಾರಾಷ್ಟ್ರ ಪೊಲೀಸರು ಬೆಳಗಾವಿಗೆ ಆಗಮಿಸಿ ಇದೇ ಜಯೇಶ್ ಕಾಂತನನ್ನು ವಿಚಾರಣೆಗೆ ಒಳಪಡಿಸಿದ್ದರು. ಆಗ ಆತನ ಬಳಿ ಅನೇಕ ವಿಐಪಿಗಳ ಸಂಖ್ಯೆಗಳನ್ನು ಹೊಂದಿರುವ ಡೈರಿ ಪತ್ತೆಯಾಗಿತ್ತು.
ಇದನ್ನೂ ಓದಿ: ನಿತಿನ್ ಗಡ್ಕರಿ ಕಚೇರಿಗೆ ಬೆದರಿಕೆ ಕರೆ ಪ್ರಕರಣ: ಬೆಳಗಾವಿಗೆ ಭೇಟಿ ನೀಡಿದ ನಾಗ್ಪುರ ಪೊಲೀಸರ ತಂಡ