ಸಿರ್ಸಾ (ಹರಿಯಾಣ) : ಸಿರ್ಸಾ ಬಳಿಯ ಎರಡು ಗ್ರಾಮಗಳಲ್ಲಿ ಎನ್‌ಐಎ ಬುಧವಾರ ದಾಳಿ ನಡೆಸಿದ್ದು, ದಾಳಿಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ. ತಖ್ತಮಾಲ್ ಮತ್ತು ಚೌತಾಲಾ ಗ್ರಾಮಗಳ ಮೇಲೆ ಎನ್‌ಐಎ ತಂಡ ದಾಳಿ ನಡೆಸಿದ್ದು, 315 ಬೋರ್‌ನ ರೈಫಲ್, 12 ಬೋರ್‌ನ ಗನ್, 315 ಬೋರ್‌ನ ಎರಡು ಕಂಟ್ರಿ ಮೇಡ್ ಪಿಸ್ತೂಲ್ ಮತ್ತು 315 ಬೋರ್‌ನ 127 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದೆ. ತಖ್ತಮಾಲ್ ಗ್ರಾಮದ ಮಾಜಿ ಸರಪಂಚ್ ಜಗ್‌ಸೀರ್ ಸಿಂಗ್ ಜಗ್ಗಾ ಅವರ ಮನೆಯಿಂದ ಈ ಎಲ್ಲ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎನ್‌ಐಎ ತಂಡವು ಚೌತಾಲಾ ಗ್ರಾಮದ ಛೋಟು ಭಟ್ ಎಂಬಾತನ ಮನೆಯ ಮೇಲೆ ದಾಳಿ ನಡೆಸಿ, ಅಲ್ಲಿಂದ ಎರಡು ವಾಕಿ-ಟಾಕಿ, 32 ಬೋರ್ ರಿವಾಲ್ವರ್ ಮತ್ತು 27 ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದೆ. ಸಿರ್ಸಾ ಜಿಲ್ಲೆಯ ದಬ್ವಾಲಿ ಮತ್ತು ಕಲನ್ವಾಲಿ ಪ್ರದೇಶದ ಯುವಕರು ಹಲವು ದರೋಡೆಕೋರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಹರಿಯಾಣ ಸಿರ್ಸಾದ ದಬ್ವಾಲಿ ಮತ್ತು ಕಲಾನ್ವಾಲಿ ಪ್ರದೇಶಗಳು ಪಂಜಾಬ್ ಗಡಿಯಲ್ಲಿವೆ.
ಇಬ್ಬರೂ ಆರೋಪಿಗಳ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯ ಸಾಗಾಟಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರೂ ಆರೋಪಿಗಳ ಅಪರಾಧ ದಾಖಲೆಗಳನ್ನು ಜಿಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಅನಧಿಕೃತ ಕಂಟ್ರಿ ಪಿಸ್ತೂಲ್ ಮಾರಾಟ ದಂಧೆ.. ರಕ್ತಸಿಕ್ತ ಇತಿಹಾಸಕ್ಕೆ ಮರುಜೀವ?