ಮುಂಬೈ: ಕ್ರೂಸ್ ಡ್ರಗ್ ಪಾರ್ಟಿ ಪ್ರಕರಣ ಸಂಬಂಧ ಆರೋಪ, ಪ್ರತ್ಯಾರೋಪಗಳು ಮುಂದುವರಿದೆ. ಇಡೀ ದಾಳಿಯೇ ಸುಳ್ಳಾಗಿದ್ದು, ಅಧಿಕಾರಿಗಳು ಅಂತ ಹೇಳಿಕೊಂಡು ದಾಳಿ ಮಾಡಿದ್ದವರು ಬಿಜೆಪಿ ಕಾರ್ಯಕರ್ತರು, ಅವರು ಎನ್‌ಸಿಬಿ ಅಧಿಕಾರಿಗಳು ಅಲ್ಲ ಎಂದು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ಆರ್ಯನ್ ಖಾನ್ ಮತ್ತು ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್‌ನನ್ನು ಬಂಧಿಸಿದ ಅಧಿಕಾರಿಗಳು ಎನ್‌ಸಿಬಿಯವರಲ್ಲ. ಅರ್ಬಾಜ್ ಮರ್ಚೆಂಟ್ ಅವರನ್ನು ಬಿಜೆಪಿ ನಾಯಕ ಮನೀಶ್ ಭಾನುಶಾಲಿ ಬಂಧಿಸಿದ್ದಾರೆ. ಬಿಜೆಪಿ ಮತ್ತು ಎನ್‌ಸಿಬಿ ನಡುವಿನ ಸಂಪರ್ಕವನ್ನು ಸ್ಪಷ್ಟಪಡಿಸುವಂತೆ ಎನ್‌ಸಿಬಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಎನ್‌ಸಿಪಿಯ ವಕ್ತಾರ ಹಾಗೂ ಮಹಾರಾಷ್ಟ್ರದ ಅಲ್ಪಸಂಖ್ಯಾತ ಸಚಿವರೂ ಆಗಿರುವ ನವಾಬ್ ಮಲ್ಲಿಕ್, ಕಾರ್ಡಿಯಾ ಕ್ರೂಸ್‌ನಲ್ಲಿ ಎನ್‌ಸಿಬಿಯ ಕ್ರಿಯೆಯ ವಿಡಿಯೋಗಳು ಮತ್ತು ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಅರ್ಬಾಜ್ ಮರ್ಚೆಂಟ್‌ನನ್ನು ಬಂಧಿಸಿದ ಮನೀಶ್ ಭಾನುಶಾಲಿ ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಭಾನುಶಾಲಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಪ್ರಮುಖ ಬಿಜೆಪಿ ನಾಯಕರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಮಲಿಕ್ ಹೇಳಿದ್ದಾರೆ.
ಮುಂಬೈನ ಎನ್‌ಸಿಬಿ ಅಧಿಕಾರಿಗಳು ಕಳೆದ ಶನಿವಾರ ರಾತ್ರಿ ಕಾರ್ಡಿಯಾ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮೇಲೆ ದಾಳಿ ಮಾಡಲಾಗಿತ್ತು. ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ಎನ್‌ಸಿಬಿ ಅಧಿಕಾರಿಗಳು ಕ್ರೂಸ್ ಪಾರ್ಟಿಯಿಂದ ಕೊಕೇನ್, ಹ್ಯಾಶಿಶ್, ಎಂಡಿ ಹಾಗೂ ಇತರ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಎನ್‌ಸಿಬಿ ಮುಂಬೈ ಮತ್ತು ನವಿ ಮುಂಬೈನಿಂದ ಡ್ರಗ್ಸ್ ಪೂರೈಸುವ ವ್ಯಾಪಾರಿಯನ್ನು ಬಂಧಿಸಿತು. ಈವರೆಗೆ 16 ಜನರನ್ನು ಬಂಧಿಸಲಾಗಿದೆ.
ಕೆಪಿ ಗೋಸಾವಿ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಆರ್ಯನ್ ಖಾನ್ ಬಂಧನದ ನಂತರ ಸೆಲ್ಫಿ ತೆಗೆದುಕೊಂಡಿದ್ದು, ಅದು ವೈರಲ್ ಆಗಿತ್ತು. ಈ ಬಗ್ಗೆ ಎನ್‌ಸಿಬಿ ಟ್ವೀಟ್ ಮಾಡಿ, ಗೋಸಾವಿಗೂ ಎನ್‌ಸಿಬಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿತ್ತು.
ಇದನ್ನೂ ಓದಿ: ಡ್ರಗ್ಸ್ ಖರೀದಿಗೆ ಕ್ರಿಪ್ಟೋ ಕರೆನ್ಸಿ ಬಳಸುತ್ತಿದ್ದ ಶಾರುಖ್ ಖಾನ್ ಪುತ್ರ: ಎನ್‌ಸಿಬಿ